HEALTH TIPS

ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರ ಸಾವಿಗೆ ಕಾರಣವಾಯಿತೇ ಬಿರಿಯಾನಿ, ಕಲ್ಲಂಗಡಿ? ; ಏನಿದು ಪ್ರಕರಣ, ಇಲ್ಲಿವರೆಗೆ ಏನೇನಾಯ್ತು?

ಮುಂಬೈ:  ಮುಂಬೈನಲ್ಲಿ ಎಪ್ರಿಲ್ 25, ಶನಿವಾರ ರಾತ್ರಿ, 13 ವರ್ಷದ ಜೈನಾಬ್ ತನ್ನ ಅಕ್ಕ, ಪೋಷಕರು ಮತ್ತು ಇತರ ಸಂಬಂಧಿಕರೊಂದಿಗೆ ಔತಣ ಕೂಟದಲ್ಲಿ ಬಿರಿಯಾನಿ ತಿಂದಿದ್ದಳು. ಮಧ್ಯರಾತ್ರಿಯ ನಂತರ ಸ್ವಲ್ಪ ಸಮಯದ ಬಳಿಕ ಕಲ್ಲಂಗಡಿಯನ್ನು ನೀಡಲಾಯಿತು. ಮರುದಿನ ಬೆಳಿಗ್ಗೆ ಆಕೆ ಅಸ್ವಸ್ಥಳಾದಳು. 


ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಮುಂದಿನ 12 ಗಂಟೆಗಳಲ್ಲಿ ಒಂದೇ ಕುಟುಂಬದ ನಾಲ್ವರು ಒಬ್ಬರ ನಂತರ ಒಬ್ಬರು ಸಾವಿಗೀಡಾದರು. ಶಂಕಿತ ವಿಷಪೂರಿತ ಆಹಾರದಿಂದ ಈ ನಾಲ್ಕು ಸಾವುಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿರಿಯಾನಿ ಔತಣ ಕೂಟ

ಮೊಬೈಲ್ ಅಂಗಡಿ ನಡೆಸುತ್ತಿದ್ದ ಸ್ಥಳೀಯ ವ್ಯಾಪಾರಿ ಅಬ್ದುಲ್ಲಾ ಅಬ್ದುಲ್ ಖಾದರ್ (40), ಅವರ ಪತ್ನಿ ನಸ್ರೀನ್ (35) ಮತ್ತು ಮಕ್ಕಳಾದ ಜೈನಾಬ್ (13) ಮತ್ತು ಆಯೇಷಾ (16) ಶನಿವಾರ ರಾತ್ರಿ 10:30ರ ಸುಮಾರಿಗೆ ಇತರ ಐದು ಸಂಬಂಧಿಕರೊಂದಿಗೆ ಭೋಜನಕ್ಕೆ ಒಟ್ಟುಗೂಡಿದ್ದರು. ಮೆನುವಿನಲ್ಲಿ ಬಿರಿಯಾನಿ ಇತ್ತು. ಊಟ ಮಾಡಿದ ನಂತರ ಅವರು ಪೈಧೋನಿಯಲ್ಲಿರುವ ತಮ್ಮ ಮನೆಗೆ ಮರಳಿದರು. ಆ ಸಮಯದವರೆಗೆ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಮನೆಗೆ ಹಿಂತಿರುಗಿದ ಕುಟುಂಬವು ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಕಲ್ಲಂಗಡಿ ಸೇವಿಸಿತು. ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಅವರು ಅಸ್ವಸ್ಥರಾದರು. ವಾಂತಿ, ಹೊಟ್ಟೆ ಉಬ್ಬರವಾಯಿತು. ಆರಂಭದಲ್ಲಿ ಸ್ಥಳೀಯ ವೈದ್ಯರು ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ರೋಗಿಯ ಸ್ಥಿತಿ ಹದಗೆಡುತ್ತಿದ್ದಂತೆ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕಿರಿಯ ಮಗಳು ಜೈನಾಬ್ ಬೆಳಿಗ್ಗೆ 10:15ರ ಸುಮಾರಿಗೆ ನಿಧನಳಾದಳು. ಅದರ ಬೆನ್ನಲ್ಲೇ ಆಕೆಯ ತಾಯಿ ನಸ್ರೀನ್ ಮತ್ತು ಅಕ್ಕ ಆಯೇಷಾ ಕೂಡ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಅವರ ತಂದೆ ಅಬ್ದುಲ್ ಖಾದರ್ ರಾತ್ರಿ 10:30ರ ಸುಮಾರಿಗೆ ನಿಧನರಾದರು.

ಆರಂಭದಲ್ಲಿ ಕುಟುಂಬವನ್ನು ಪರೀಕ್ಷಿಸಿದ ಡಾ. ಜಿಯಾದ್ ಖುರೇಷಿ, ಅವರ ಆರೋಗ್ಯ ತುಂಬಾ ಕೆಟ್ಟಿತ್ತು, ಅವರು ದಣಿದಂತೆ ಕಾಣುತ್ತಿದ್ದರು ಎಂದು ತಿಳಿಸಿದ್ದಾರೆ. ಅವರಿಗೆ ತೀವ್ರ ವಾಂತಿ ಮತ್ತು ಅತಿಸಾರ ಇತ್ತು. "ನಾನು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ಅವರು ಕಲ್ಲಂಗಡಿ ತಿಂದಿರುವುದಾಗಿ ನನಗೆ ತಿಳಿಸಿದರು" ಎಂದು ವೈದ್ಯರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

"ಅಬ್ದುಲ್ಲಾ ಮತ್ತು ಆಯೇಷಾ ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಕಲ್ಲಂಗಡಿ ತಿಂದ ನಂತರ ಅವರಿಗೆ ವಾಂತಿ ಮತ್ತು ಅತಿಸಾರ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಅನುಮಾನವಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಿಗಾಗಿ ಕಾಯಲಾಗುತ್ತಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಕಲ್ಲಂಗಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಅನುಮಾನಾಸ್ಪದ ಸಾವುಗಳು

ಅನುಮಾನಾಸ್ಪದ ಸಾವು ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗಳು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುಟುಂಬ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನೆರೆಹೊರೆಯವರು ನಾಲ್ಕನೇ ಮಹಡಿಯ ಹೋಮಿಯೋಪತಿ ವೈದ್ಯ ಜಿಯಾದ್ ಖುರೇಷಿಗೆ ಕರೆ ಮಾಡಿ, ಜೈನಾಬ್ ಅವರ ಬಾಯಿಯಲ್ಲಿ ನೊರೆ ಬಂದಿದೆ, ನಾಡಿಮಿಡಿತ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆ ಹೊತ್ತಿಗೆ ಕುಟುಂಬದ ಇತರ ಮೂವರು ಸದಸ್ಯರು ಅರೆಪ್ರಜ್ಞಾಹೀನರಾಗಿದ್ದರು.

ಒಬ್ಬೊಬ್ಬರಾಗಿ ನೆರೆಹೊರೆಯವರು ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ದರು. ಅವರನ್ನು ಮೊದಲು ಸಬೂ ಸಿದ್ದಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಜೈನಾಬ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅಬ್ದುಲ್ಲಾ ಮತ್ತು ನಸ್ರೀನ್ ಅವರನ್ನು ನಂತರ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಆಯೇಷಾ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಾಖಲಾದ ಎರಡು ಗಂಟೆಗಳ ನಂತರ ನಸ್ರೀನ್ ನಿಧನರಾದರು. ಆಯೇಷಾ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ನಂತರ ಅಬ್ದುಲ್ ಖಾದರ್ ಅವರನ್ನು ಶೀಘ್ರದಲ್ಲೇ ದಾಖಲಿಸಲಾಯಿತು. ಇಬ್ಬರೂ ಸುಮಾರು ಐದು ಗಂಟೆಗಳ ಅಂತರದಲ್ಲಿ ನಿಧನರಾದರು.

ನಾಲ್ವರು ಕುಟುಂಬ ಸದಸ್ಯರ ಅನುಮಾನಾಸ್ಪದ ಸಾವಿನ ಹಿಂದೆ ವಿಷಪೂರಿತ ಆಹಾರದ ಶಂಕೆ ವ್ಯಕ್ತವಾಗಿದ್ದರೂ, ಪೊಲೀಸರು ಅರ್ಧ ತಿಂದ ಕಲ್ಲಂಗಡಿ ತುಂಡನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದಾರೆ. "ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಶವಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ಹೆಚ್ಚಿನ ತನಿಖೆಗೆ ಸಂಗ್ರಹಿಸಲಾಗಿದೆ" ಎಂದು ಮುಂಬೈ ಪೊಲೀಸರ ಉಪ ಪೊಲೀಸ್ ಆಯುಕ್ತ ಪ್ರವೀಣ್ ಮುಂಡೆ ತಿಳಿಸಿದ್ದಾರೆ.

ತನಿಖೆಗಾಗಿ ವಿಧಿವಿಜ್ಞಾನ ಮತ್ತು ಆಹಾರ ಇಲಾಖೆಗಳನ್ನು ಸಹ ಒಟ್ಟುಗೂಡಿಸಲಾಗಿದೆ. ಅವರು ಸೇವಿಸಿದ ಕಲ್ಲಂಗಡಿಯಲ್ಲಿ ಯಾವುದೇ ಬಾಹ್ಯ ವಿಷಕಾರಿ ವಸ್ತು ಅಥವಾ ಕಲಬೆರಕೆ ಇದೆಯೇ ಎಂಬುದನ್ನು ರಾಜ್ಯ ಆಹಾರ ಮತ್ತು ಔಷಧ ಆಡಳಿತ ತನಿಖೆ ನಡೆಸುತ್ತಿದೆ. ವಿಧಿವಿಜ್ಞಾನ ತಂಡವು ಆಹಾರ ಮಾದರಿಗಳು ಮತ್ತು ಒಳಾಂಗಗಳ ವರದಿಗಳ ಆಧಾರದ ಮೇಲೆ ಸಾವಿನ ಕಾರಣವನ್ನು ಪತ್ತೆಹಚ್ಚಲಿದೆ.

ಜೆಜೆ ಆಸ್ಪತ್ರೆಯ ಸೂಕ್ಷ್ಮ ಜೀವವಿಜ್ಞಾನ ವಿಭಾಗವು ಸೋಂಕುಗಳು ಅಥವಾ ಬ್ಯಾಕ್ಟೀರಿಯಾಗಳ ಉಪಸ್ಥಿತಿಯನ್ನು ಪರೀಕ್ಷಿಸುತ್ತಿದೆ. ಅಂಗಾಂಶಗಳನ್ನು ಹಿಸ್ಟೋಪಾಥಾಲಜಿ ಪರೀಕ್ಷೆಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಹಿಸ್ಟೋಪಾಥಾಲಜಿ ವರದಿ ಬರುವವರೆಗೆ ಸಾವಿನ ಕಾರಣದ ಕುರಿತು ಅಂತಿಮ ಅಭಿಪ್ರಾಯ ಕಾಯ್ದಿರಿಸಲಾಗಿದೆ.

ಸದ್ಯಕ್ಕೆ, ವೈದ್ಯರು ಕಲ್ಲಂಗಡಿ ಸೇವನೆಯ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ವೈದ್ಯರು ಹೇಳಿದ್ದೇನು?

ಅವರು ಸೇವಿಸಿದ ಆಹಾರದಲ್ಲಿ ತೀವ್ರ ವಿಷಪೂರಿತ ಲಕ್ಷಣಗಳು ಕಂಡುಬಂದಿವೆ. ಇದರಲ್ಲಿ ತೀವ್ರ ಮೂತ್ರಪಿಂಡ ಹಾನಿಯೂ ಸೇರಿದೆ. ಕಲ್ಲಂಗಡಿ ಹಳೆಯದಾಗಿದ್ದರೂ ಸಹ ನಾಲ್ವರು ವ್ಯಕ್ತಿಗಳು ಇಷ್ಟು ತ್ವರಿತವಾಗಿ ಮತ್ತು ಮಾರಕವಾಗಿ ಸಾವಿಗೀಡಾಗುವುದು "ಅಸಂಭವ" ಎಂದು ಜೆಜೆ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. "ಕೆಲವು ಮಾಲಿನ್ಯಕಾರಕ ಅಥವಾ ರಾಸಾಯನಿಕ ಸಂಯೋಜನೆ ಇದಕ್ಕೆ ಕಾರಣವಾಗಿರಬಹುದು. ಈ ಹಂತದಲ್ಲಿ ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ" ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

ಕೆಇಎಂ ಆಸ್ಪತ್ರೆಯ ತಜ್ಞರು ಸಹ, ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನ ನೀರಿನ ಅಂಶದಿಂದಾಗಿ ಕಲ್ಲಂಗಡಿ ಸಾಮಾನ್ಯವಾಗಿ ಸುರಕ್ಷಿತ ಮತ್ತು ವ್ಯಾಪಕವಾಗಿ ಸೇವಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೆಲವು ತರಕಾರಿಗಳಿಂದ ವಿಷಕಾರಿ ಪ್ರತಿಕ್ರಿಯೆಗಳ ಅಪರೂಪದ ಪ್ರಕರಣಗಳಿದ್ದರೂ, ಕಲ್ಲಂಗಡಿಯನ್ನು ಇಂತಹ ಮಾರಕ ಘಟನೆಗಳಿಗೆ ನೇರವಾಗಿ ಜೋಡಿಸುವ ಪುರಾವೆಗಳಿಲ್ಲ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆಕಾಶ್ ಶುಕ್ಲಾ ಹೇಳಿದ್ದಾರೆ.

ಕಲ್ಲಂಗಡಿ ಹಣ್ಣು ಸಾವಿಗೆ ಕಾರಣವಾಗಬಹುದೇ?

ತಜ್ಞರ ಪ್ರಕಾರ, ನೆಲದ ಮೇಲೆ ಬೆಳೆದ ಕಲ್ಲಂಗಡಿ ಹೊಲದಿಂದ ಕೊಯ್ಯುವಾಗ ಮತ್ತು ಸಾಗಣೆಯಲ್ಲಿ ರೋಗಕಾರಕಗಳನ್ನು ಅಂಟಿಸಿಕೊಳ್ಳಬಹುದು. ಸಾಲ್ಮೊನೆಲ್ಲಾ ಅಥವಾ ಇ.ಕೋಲಿ ಬ್ಯಾಕ್ಟೀರಿಯಾಗಳು ಅದರ ಮೇಲ್ಮೈಯಲ್ಲಿ ನೆಲೆಗೊಳ್ಳಬಹುದು. ಹಣ್ಣು ಅಥವಾ ಕೈಗಳನ್ನು ತೊಳೆಯದಿದ್ದರೆ, ಈ ರೋಗಕಾರಕಗಳು ದೇಹಕ್ಕೆ ಪ್ರವೇಶಿಸಬಹುದು.

ಕೆಲವರು ಕಲ್ಲಂಗಡಿ ಮಾತ್ರ ಸಾವಿಗೆ ಕಾರಣವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಾ. ರಿಷಿಕೇಶ್ ಮಾಲೋಕರ್ ಹೇಳುವಂತೆ, "ಕಲುಷಿತ ಕಲ್ಲಂಗಡಿ ಫುಡ್ ಪಾಯಿಸನಿಂಗ್‌ ಗೆ ಕಾರಣವಾಗಬಹುದು. ಆದರೆ 24 ಗಂಟೆಗಳಲ್ಲಿ ಇಂತಹ ಮಾರಕ ಪರಿಣಾಮ ಕಾಣಿಸಿಕೊಳ್ಳುವುದು ವಿಚಿತ್ರ. ದೇಹಗಳು ಸೋಂಕಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಆದ್ದರಿಂದ ಕಲ್ಲಂಗಡಿ ಮಾತ್ರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿಯುತ್ತದೆ."

ಹೆಚ್ಚಿನ ಕೀಟನಾಶಕ ಬಳಕೆಯಿಂದ ಕಲುಷಿತಗೊಂಡ ಹಣ್ಣು ರಕ್ತದೊತ್ತಡ ಕುಸಿತ ಸೇರಿದಂತೆ ತುರ್ತು ಲಕ್ಷಣಗಳನ್ನು ಉಂಟುಮಾಡಬಹುದು.

ಆರ್ಗನೋಫಾಸ್ಫೇಟ್ ವಿಷ ಅಪರೂಪವಾದರೂ ತೀವ್ರವಾಗಿದ್ದು, ಉಸಿರಾಟ ತೊಂದರೆ, ಸ್ನಾಯು ನಡುಕು, ಸೆಳೆತಗಳಂತಹ ಲಕ್ಷಣಗಳನ್ನು ಉಂಟುಮಾಡಬಹುದು.

ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಕೃತಕವಾಗಿ ಹಣ್ಣಾಗಿಸಿದ ಹಣ್ಣುಗಳು ತಲೆನೋವು, ತಲೆತಿರುಗು, ಸೆರೆಬ್ರಲ್ ಊತ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.

ಕಲ್ಲಂಗಡಿ ಹೆಚ್ಚಿನ ನೀರಿನ ಅಂಶ ಮತ್ತು ತಟಸ್ಥ ಠಿಊ ಹೊಂದಿರುವುದರಿಂದ, ಕಲುಷಿತಗೊಂಡರೆ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸೂಕ್ತ ವಾತಾವರಣ ಒದಗಿಸುತ್ತದೆ. ಇದು ಗ್ಯಾಸ್ಟ್ರೋಎಂಟರೈಟಿಸ್, ಸೆಪ್ಸಿಸ್ ಅಥವಾ ಬಹು ಅಂಗ ವೈಫಲ್ಯಕ್ಕೂ ಕಾರಣವಾಗಬಹುದು.

ಕೆಲ ಸಂದರ್ಭಗಳಲ್ಲಿ, ಶಾಖದಿಂದ ಕಲುಷಿತ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಬಹುದು.

2012ರ ವರದಿಯ ಪ್ರಕಾರ, ಯುಕೆಯಲ್ಲಿ ಕಲ್ಲಂಗಡಿ ಮೂಲಕ ಸಾಲ್ಮೊನೆಲ್ಲಾ ಸೋಂಕು ಹರಡಿರುವ ಘಟನೆಗಳು ವರದಿಯಾಗಿವೆ.

ಹೆಚ್ಚು ಪ್ರಮಾಣದಲ್ಲಿ ಕಲ್ಲಂಗಡಿ ಸೇವನೆಯಿಂದ ಪೊಟ್ಯಾಸಿಯಮ್ ಹೆಚ್ಚಾಗಿ, ಹೃದಯ ಬಡಿತ ನಿಧಾನಗೊಳ್ಳುವುದು ಮತ್ತು ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆಯೂ ಇದೆ.

'' failed to upload. Invalid response: RpcError








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries