ಬದಾಯು: 'ಶಾಸನಸಭೆಗಳಲ್ಲಿ ಮಹಿಳೆಯರಿಗೆ ನೀಡಲಾಗುವ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ಮತ್ತು ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎನ್ನುವ ಖಾಸಗಿ ಮಸೂದೆಯನ್ನು ಪಕ್ಷವು ಮಂಡಿಸಲಿದೆ' ಎಂದು ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಸೋಮವಾರ ತಿಳಿಸಿದರು.
'ಪಿಟಿಐ' ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿ, 'ಕೇಂದ್ರವು ಮಹಿಳೆಯರಿಗೆ ಮೀಸಲಾತಿ ನೀಡಲು ತಂದಿರುವ ಮಸೂದೆಯಲ್ಲಿ ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ಇದೆಯೇ ಇಲ್ಲವೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಇದೇ ಈ ಮಸೂದೆಯ ಅತಿ ದೊಡ್ಡ ಕೊರತೆ. ಇದಕ್ಕಾಗಿಯೇ ಪಕ್ಷವು ಖಾಸಗಿ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ' ಎಂದರು.
'ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಸ್ತಾವವನ್ನು ನಮ್ಮ ಪಕ್ಷವು ನಿರಂತರವಾಗಿ ಬೆಂಬಲಿಸಿಕೊಂಡು ಬಂದಿದೆ. ಆದರೆ, ಮೀಸಲಾತಿಯು ಎಲ್ಲ ವರ್ಗಗಳ ಮಹಿಳೆಯರಿಗೆ ಸಮಾನವಾಗಿ ಹಂಚಿಕೆಯಾಗಬೇಕು. ದುರಾದೃಷ್ಟವಶಾತ್ ಕೇಂದ್ರ ಸರ್ಕಾರದ ಉದ್ದೇಶ ಏನು ಎನ್ನುವುದರ ಬಗ್ಗೆಯೇ ಸ್ಪಷ್ಟತೆ ಇಲ್ಲವಾಗಿದೆ' ಎಂದರು.
'2023ರಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ಎಲ್ಲ ವಿರೋಧ ಪಕ್ಷಗಳು ಬೆಂಬಲಿಸಿದ್ದವು. ಆದರೆ, ಈ ಕಾಯ್ದೆಯನ್ನು ಜಾರಿ ಮಾಡುವ ಬಗ್ಗೆ ಆದೇಶ ಹೊರಡಿಸಲು ಕೇಂದ್ರ ಸರ್ಕಾರ ಮೂರು ವರ್ಷ ಏಕೆ ತೆಗೆದುಕೊಂಡಿತು? 2011 ಗಣತಿ ಆಧಾರದಲ್ಲಿಯೇ ಮೀಸಲಾತಿ ನೀಡುವುದಾದರೆ, 2023ರಲ್ಲಿ ಹೊಸ ಮಸೂದೆ ರಚಿಸುವ ಅಗತ್ಯ ಏನಿತ್ತು?' ಎಂದು ಪ್ರಶ್ನಿಸಿದರು.

