ನವದೆಹಲಿ (PTI): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಯ್ದೆ 2008ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
'ಎನ್ಐಎ ವಿಚಾರವಾಗಿ ಎದ್ದಿರುವ ಪ್ರಶ್ನೆಗಳು ಬಹುಮುಖ್ಯವಾದವು' ಎಂದು ಹೇಳಿದ ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಕೇಂದ್ರ ಸರ್ಕಾರ, ಎನ್ಐಎ ಮತ್ತು ಇತರರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.
'ಪ್ರತಿವಾದಿಗಳು ನಾಲ್ಕು ವಾರಗಳ ಒಳಗಾಗಿ ಪ್ರಮಾಣಪತ್ರ ಸಲ್ಲಿಸಬೇಕು. ಆ ಬಳಿಕ ಎರಡು ವಾರಗಳ ಒಳಗಾಗಿ ಅರ್ಜಿದಾರರು ಮರು ಪ್ರಮಾಣಪತ್ರ ಸಲ್ಲಿಸಬೇಕು' ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
'2008ರ ಎನ್ಐಎ ಕಾಯ್ದೆಯು ಸಂವಿಧಾನ 14ನೇ ವಿಧಿಯ ಉಲ್ಲಂಘನೆಯಾಗಿದೆ ಮತ್ತು ಕೇಂದ್ರ ಶಾಸಕಾಂಗದ ಅಧಿಕಾರವನ್ನು ಮೀರಿದ್ದಾಗಿದೆ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.
'ಪೊಲೀಸ್ ಠಾಣೆಯಿಲ್ಲದೆ, ಎನ್ಐಎ ಎಫ್ಐಆರ್ ದಾಖಲಿಸಬಹುದೇ' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಪ್ರಶ್ನಿಸಿದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದೆ.

