ಕುಂಬಳೆ: ಕಲಾಕುಂಚ ಕೇರಳ ಗಡಿನಾಡ ಘಟಕ, ಧರ್ಮತ್ತಡ್ಕ ಯುವಕ ಸಂಘ, ಗ್ರಂಥಾಲಯ ಮತ್ತು ವಾಚನಾಲಯ ಮತ್ತು ಶಾಲಾ ಎನ್ ಎಸ್ ಎಸ್ ಘಟಕಗಳು ಆಯೋಜಿಸಿದ್ದ ಕನ್ನಡ ಕಣ್ಮಣಿ ಕಯ್ಯಾರ ಕಿಞ್ಞಣ್ಣ ರೈ ಎಂಬ ವಿಚಾರ ಸಂಕಿರಣ ಧರ್ಮತ್ತಡ್ಕದಲ್ಲಿ ಇತ್ತೀಚೆಗೆ ನಡೆಯಿತು. ಹಿರಿಯ ಲೇಖಕ, ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್ ಮೂಡಿತ್ತಾಯ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಚಿಂತಕ, ಕವಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಉಪನ್ಯಾಸ ನೀಡಿದರು.
ಶತಾಯುಷಿ ಕಿಞ್ಞಣ್ಣ ರೈಗಳ ವ್ಯಕ್ತಿತ್ವ ಮತ್ತು ಸಾಧನೆಗಳ ವಿವಿಧ ಮುಖಗಳನ್ನು ಪರಿಚಯಿಸಿದ ಅವರು ರೈಗಳು ಅಪ್ಪಟ ದೇಶಾಭಿಮಾನಿ. ಗಾಂಧೀಜಿಯವರ ಭೇಟಿಯಿಂದ ಪ್ರೇರಣೆ ಪಡೆದವರು. ಕವಿಯಾಗಿ ತನ್ನ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಕೊಂಡಾಡಿದವರು, 32 ವರ್ಷಗಳ ಕಾಲ ಶಿಕ್ಷಕರಾಗಿ ತನ್ನ ಕಂಚಿನ ಕಂಠದಿಂದ ಅಪಾರ ವಿದ್ಯಾರ್ಥಿಗಳ ಜ್ಞಾನದ ಹಸಿವು ತಣಿಸಿದವರು. ಮೊದಲ ಬಾರಿ ಉಪನಿಷತ್ತನ್ನು ಕಾವ್ಯ ರೂಪದಲ್ಲಿ ಕನ್ನಡಕ್ಕೆ ತಂದ ಖ್ಯಾತಿ ಇವರದ್ದು ರಾಷ್ಟ್ರ ಧುರೀಣರನ್ನು ವಿಶಿಷ್ಟ ರೀತಿಯಲ್ಲಿ ಪರಿಚಯಿಸಿದವರು. ಪಾಠ ಪುಸ್ತಕಗಳನ್ನು ತಯಾರಿಸಿಕೊಟ್ಟು ಶಿಕ್ಷಣ ರಂಗದಲ್ಲಿ ಪಾಲ್ಗೊಂಡರು, ಪೈಗಳು ಒಳಗೊಂಡಂತೆ ತನ್ನ ಪ್ರದೇಶದ ಹಿರಿಯ ಸಾಧಕರ ವ್ಯಕ್ತಿ ಚಿತ್ರಗಳನ್ನು ಕಟ್ಟಿ ಕೊಟ್ಟವರು. ಅವರು ಬರೆದ ಆತ್ಮಚರಿತ್ರೆ, ಕಥೆಗಳು, ಮಕ್ಕಳ ಕವಿತೆಗಳು ಹಾಗೂ ಸಣ್ಣಕಥೆಗಳು ಅಪಾರ ಜನಮನ್ನಣೆ ಗಳಿಸಿದ್ದಲ್ಲದೆ ಎಲ್ಲ ಕನ್ನಡಿಗರಿಗೆ ಸ್ಫೂರ್ತಿ ತುಂಬುವಂತಿದ್ದುವು ಎಂದರು.
ಕಲಾಕುಂಚದ ಸ್ಥಾಪಕಾಧ್ಯಕ್ಷೆ ಜಯಲಕ್ಷ್ಮೀ ಕಾರಂತ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಓದುಗನ ಮೇಲೂ ವಿಭಿನ್ನ ಪರಿಣಾಮ ಬೀರಬಲ್ಲ ಮತ್ತು ಎಲ್ಲೆ ಮೀರಿದ ಕಲ್ಪನಾಲೋಕಕ್ಕೂ ಒಯ್ಯಬಲ್ಲ ಪುಸ್ತಕದ ಸ್ಥಾನವನ್ನು ಗೂಗಲ್ ಕಸಿಯುವುದಕ್ಕೆ ಸಾಧ್ಯವಿಲ್ಲ ಎಂದರು.
ವಿಶ್ರಾಂತ ಪ್ರಾಂಶುಪಾಲ ರಾಮಚಂದ್ರ ಭಟ್ ಪುಸ್ತಕದ ಓದಿನ ರುಚಿಯನ್ನು ವಿದ್ಯಾರ್ಥಿಗಳು ಕಳಕೊಳ್ಳಬಾರದು ಎಂದು ಶುಭ ಹಾರೈಸಿದರು. ವಿದ್ಯಾಸಂಸ್ಥೆಯ ಪ್ರಬಂಧಕ ಶಂಕರ ನಾರಾಯಣ ಭಟ್ ಹಾಗೂ ಪ್ರಾಂಶುಪಾಲ ಸತೀಶ ಕುಮಾರ್ ಒಡ್ಡಂಬೆಟ್ಟು ಶುಭ ಹಾರೈಸಿದರು. ಧರ್ಮತ್ತಡ್ಕದ ಯುವಕ ಸಂಘ, ಗ್ರಂಥಾಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಂಥಾಲಯದ ಅಧ್ಯಕ್ಷ ರಾಮಮೋಹನ ಚೆಕ್ಕೆ ಸ್ವಾಗತಿಸಿ, ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರ್ವಹಿಸಿದರು. ಚಿತ್ರಕಲಾ ಮತ್ತು ಆಶಾಲತಾ ಪ್ರಾರ್ಥಿಸಿದರು.

.jpg)
.jpg)
