ಶ್ರೀನಗರ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯಬಾದ ಅಂತರರಾಜ್ಯ ಜಾಲವೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಭೇದಿಸಿದ್ದರು.
ಭಯೋತ್ಪಾದಕ ಚಟುವಟಿಕೆಗಳ ಪ್ರಮುಖ ಸಂಚುಕೋರನಾಗಿದ್ದ ಮತ್ತು 16 ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಪಾಕಿಸ್ತಾನದ ಅಬ್ದುಲ್ಲಾ ಅಲಿಯಾಸ್ ಅಬು ಹುರೈರಾ, ಪಾಕಿಸ್ತಾನದವನೇ ಆದ ಉಸ್ಮಾನ್ ಅಲಿಯಾಸ್ ಖುಬೈಬ್, ಶ್ರೀನಗರ ನಿವಾಸಿಗಳಾದ ಮೊಹಮ್ಮದ್ ನಕೀಬ್ ಭಟ್, ಅದಿಲ್ ರಶೀದ್ ಭಟ್, ಗುಲಾಮ್ ಮೊಹಮ್ಮದ್ ಮೀರ್ ಎಂಬವರನ್ನು ಬಂಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಆಚೆಗೂ ಭಯೋತ್ಪಾದನಾ ಜಾಲವನ್ನು ವಿಸ್ತರಿಸುವಲ್ಲಿ ಸಕ್ರಿಯನಾಗಿದ್ದ ಹುರೈರಾ, ಹಲವು ವೇಷ ತೊಟ್ಟಿದ್ದ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪ್ಲಂಬರ್, ಎಲೆಕ್ಟ್ರಿಷಿಯನ್, ಪೇಂಟರ್, ಷೇರು ಮಾರುಕಟ್ಟೆಯ ಟ್ರೇಡರ್ ಹಾಗೂ ಅಡುಗೆಯವನಾಗಿ ನಟಿಸಿದ್ದ ಎಂಬುದು ಇದೀಗ ಬಹಿರಂಗವಾಗಿದೆ.
2010ರಲ್ಲಿ ಕಾಶ್ಮೀರಕ್ಕೆ ನುಸುಳಿದ್ದ ಹುರೈರಾ, ನಂತರ ಪಂಜಾಬ್‌ಗೆ ವಾಸ್ತವ್ಯ ಬದಲಿಸಿಕೊಂಡು, ರಹಸ್ಯವಾಗಿ ಕಾರ್ಯಪ್ರವೃತ್ತನಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ಉಗ್ರರಿಗೆ ಆತಿಥ್ಯ ನೀಡುತ್ತಿದ್ದ ಹಾಗೂ ಸಂಚಾರಕ್ಕೆ ನೆರವಾಗುತ್ತಿದ್ದ ಎಂಬ ಆರೋಪ ಈತನ ಮೇಲಿದೆ.
ಸ್ಥಳೀಯ ನಿವಾಸಿಗಳೊಂದಿಗೆ ಸಲೀಸಾಗಿ ಬೆರೆಯುವ ಸಲುವಾಗಿ ಹಾಗೂ ಅನುಮಾನಗಳು ಮೂಡದಂತೆ ನೋಡಿಕೊಳ್ಳಲು ಆಗಾಗ್ಗೆ ವೃತ್ತಿ ಬದಲಿಸುತ್ತಿದ್ದ. ದಿನಗೂಲಿಯನವಾಗಿ ಕೆಲಸ ಮಾಡುವುದರಿಂದ ಹಿಡಿದು, ಸಣ್ಣ ವ್ಯಾಪಾರದಲ್ಲಿಯೂ ತೊಡಗಿಕೊಳ್ಳುತ್ತಿದ್ದ. ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರಿಸುತ್ತಲೇ ಷೇರು ಮಾರುಕಟ್ಟೆ ಟ್ರೇಡರ್ ಆಗಿಯೂ ಗುರುತಿಸಿಕೊಂಡಿದ್ದ ಎನ್ನಲಾಗಿದೆ ಎಂದು ಸ್ಥಳೀಯ ಸುದ್ದಿ ಪೋರ್ಟಲ್ 'ಕೆಡಿಸಿ' ವರದಿ ಮಾಡಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಭಯೋತ್ಪಾದನಾ ಚಟುವಟಿಕೆಗಳ ಇತ್ತೀಚಿನ ಮಾದರಿಗಳನ್ನು ವಿಶ್ಲೇಷಿಸಿದರೆ ಹುರೈರಾ ನಡೆಯನ್ನು ಅಂದಾಜಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಾಲ ವಿಸ್ತರಣೆಗೆ ಆದ್ಯತೆ
ಈ ಪ್ರಕರಣವು, ಉಗ್ರ ಚಟುವಟಿಕೆಗಳಲ್ಲಿ ಆಗುತ್ತಿರುವ ಸ್ಥಿತ್ಯಂತರವನ್ನು ಪ್ರತಿಬಿಂಬಿಸುತ್ತದೆ. ಎಲ್‌ಇಟಿಯಂತಹ ಸಂಘಟನೆಗಳು ಸಾಂಪ್ರದಾಯಿಕ ನೆಲೆಗಳನ್ನೂ ಮೀರಿ ಕಾರ್ಯಾಚರಣೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮುಂದುವರಿಸಿವೆ. ಅದರ ಭಾಗವಾಗಿ ನಗರ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಕಣ್ತಪ್ಪಿಸಲು ಇಂತಹ ತಂತ್ರಗಳನ್ನು ಅನುಸರಿಸಲಾಗುತ್ತಿದೆ.
'ಹಲವು ಉಗ್ರರು ದಟ್ಟ ಅರಣ್ಯಗಳು, ಪರ್ವತ ಪ್ರದೇಶಗಳಲ್ಲಿ; ಅದರಲ್ಲೂ ಜಮ್ಮುವಿನ ವಿವಿಧೆಡೆ ಕಾರ್ಯಾಚರಣೆ ಮುಂದುವರಿಸಿದ್ದರೂ, ಆಯ್ದ ಗುಂಪುಗಳನ್ನು ಮಾತ್ರವೇ ನಗರ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಸಂಘರ್ಷ ನಡೆಸುವುದು ಅಥವಾ ದಾಳಿ ಸಂಘಟಿಸುವುದು ಈ ಗುಂಪಿನ ಕೆಲಸವಲ್ಲ. ಬದಲಾಗಿ, ಸಮಾಜದಲ್ಲಿ ಬೆರೆಯುವುದು ಹಾಗೂ ಆ ಮೂಲಕ ಉಗ್ರ ಜಾಲವನ್ನು ವಿಸ್ತರಿಸುವುದೇ ಆಗಿದೆ' ಎಂದು ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ, ನಾಗರಿಕ ಸಮಾಜದಲ್ಲಿ ಸಾಮಾನ್ಯರಂತೆ ಬದುಕಲು ಈ ಉಗ್ರರಿಗೆ ತರಬೇತಿ ನೀಡಲಾಗಿರುತ್ತದೆ. ಆಗಾಗ್ಗೆ ಕೆಲಸ ಬದಲಿಸುವುದು, ವಾಸ್ತವ್ಯ ಬದಲಿಸುವುದು, ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತೆರೆಮರೆಯಲ್ಲೇ ಉಳಿಯುವುದು ಹೇಗೆ ಎಂಬುದನ್ನು ಕಲಿಸಲಾಗಿರುತ್ತದೆ.
ಈ ರೀತಿ ಸಕ್ರಿಯವಾಗಿರುವ ಸದಸ್ಯರು ಸಂಘಟನೆಗಳು ಮತ್ತು ಜಾಲ ವಿಸ್ತರಣೆಗೆ ಕೊಂಡಿಯಾಗಿ ಕೆಲಸ ಮಾಡುತ್ತಿರುತ್ತಾರೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
'ಉಗ್ರರಿಗೆ ಆತಿಥ್ಯ ನೋಡಿಕೊಳ್ಳುವುದು, ಸಂಚಾರ ಸುಗಮಗೊಳಿಸುವುದು, ಹಣಕಾಸಿನ ನಿರ್ವಹಣೆ ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿರುತತದೆ. ಕೆಲವೊಮ್ಮೆ ನೇಮಕಾತಿಯ ಹೊಣೆಯನ್ನೂ ಹೊತ್ತುಕೊಳ್ಳುತ್ತಾರೆ. ಆದರೆ, ಸಾಮಾನ್ಯವಾಗಿ ತಲೆ ಮರೆಸಿಕೊಂಡೇ ಇರುತ್ತಾರೆ' ಎಂದು ವಿವರಿಸಿದ್ದಾರೆ.
ಕಾಶ್ಮಿರದ ಆಚೆಗೂ...
ಜಮ್ಮು ಮತ್ತು ಕಾಶ್ಮೀರದ ಆಚೆಗೂ ಉಗ್ರ ಜಾಲ ವಿಸ್ತರಿಸುವ ಪ್ರಯತ್ನಗಳು ನಡೆದಿವೆ ಎಂಬುದನ್ನು ಈ ಪ್ರಕರಣ ಬಹಿರಂಗಪಡಿಸಿದೆ. ಎಲ್‌ಇಟಿಯಂತಹ ಸಂಘಟನೆಯಗಳು ಪಂಜಾಬ್ ಹಾಗೂ ಇತರ ರಾಜ್ಯಗಳಲ್ಲಿ ಕಾರ್ಯಕರ್ತರನ್ನು ನಿಯೋಜಿಸುವ ಮೂಲಕ, ದೀರ್ಘಕಾಲದ ವರೆಗೆ ಚಟುವಟಿಕೆಗಳನ್ನು ಮುಂದುವರಿಸುವ ಜಾಲ ರೂಪಿಸಲು ಪ್ರಯತ್ನಿಸುತ್ತಿವೆ. ಇದು ಭದ್ರತಾ ಕಳವಳವನ್ನು ಹೆಚ್ಚಿಸಿದೆ.
ಹುರೈರಾ ಮತ್ತು ಆತನ ಸಹಚರರು ಎಂದು ಶಂಕಿಸಲಾಗಿರುವ ಇತರರ ಬಂಧನವು ಭದ್ರತಾ ದೃಷ್ಟಿಯಿಂದ ಮಹತ್ವದ್ದಾಗಿದೆ. ತನಿಖಾಧಿಕಾರಿಗಳು, ಉಗ್ರರ ಜಾಲದ ಸಂಪೂರ್ಣ ವ್ಯಾಪ್ತಿ, ಸಂಪರ್ಕಗಳು, ಆರ್ಥಿಕ ಮೂಲಗಳು ಮತ್ತು ಎಲ್ಲೆಲ್ಲ ಕಾರ್ಯಾಚರಣೆ ನಡೆದಿದೆ ಎಂಬುದರ ಪತ್ತೆಗೆ ಇಳಿದಿದ್ದಾರೆ.
ಈ ಪ್ರಕರಣವು ಉಗ್ರ ಸಂಘಟನೆಗಳ ಕಾರ್ಯಾಚರಣೆ ಶೈಲಿ ಹಂತ ಹಂತವಾಗಿ ಬದಲಾಗುತ್ತಿದೆ ಎಂಬ ವಾಸ್ತವವನ್ನು ಬಿಚ್ಚಿಟ್ಟಿದೆ. ಭಯೋತ್ಪಾದಕರು ಸೀಮಿತ ವಲಯಗಳಲ್ಲಿ ಮಾತ್ರವೇ ಉಳಿದಿಲ್ಲ. ನಗರ ಪರಿಸರಕ್ಕೂ ಕಾಲಿಟ್ಟಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಈ ನಿಟ್ಟಿನಲ್ಲಿ ಭದ್ರತೆ ಹಾಗೂ ತನಿಖಾ ಸಂಸ್ಥೆಗಳು, ಗುಪ್ತಚರ ಇಲಾಖೆ ಸಮನ್ವಯ ಕಾರ್ಯಾಚರಣೆ ನಿರ್ಣಾಯಕವಾಗಿದೆ.

