ನವದೆಹಲಿ: ಪಿಚ್ ಮತ್ತು ಮೈದಾನದ ನಿರ್ವಹಣೆಗೆ ಬಳಸುತ್ತಿರುವ ನೀರಿನ ಮೂಲ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾದ ಕಾರಣಕ್ಕಾಗಿ ಕ್ರೀಡಾಂಗಣದಲ್ಲಿನ ಎಲ್ಲ ಚಟುವಟಿಕೆಗಳಿಗೆಏಕೆ ನಿಷೇಧ ಹೇರಬಾರದು ಎಂದು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣವೂ ಸೇರಿದಂತೆ ದೇಶದ ಒಟ್ಟು ಆರು ಕ್ರೀಡಾಂಗಣಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೋಟಿಸ್ ಜಾರಿಗೊಳಿಸಿದೆ.
ದೇಶದ ಏಳು ಕ್ರೀಡಾಂಗಣಗಳಲ್ಲಿ ಪಿಚ್ ನಿರ್ವಹಣೆಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿದ ನೀರನ್ನು ಬಳಸುವ ಬದಲಿಗೆ ಅಂತರ್ಜಲವನ್ನೇ ಬಳಕೆ ಮಾಡಲಾಗುತ್ತಿದೆ. ಜತೆಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಯನ್ನೂ ಅಳವಡಿಸಲಾಗಿಲ್ಲ ಎಂದು ಆರೋಪಿಸಿ ಸಲ್ಲಿಕೆ ಯಾಗಿರುವ ಅರ್ಜಿ ಎನ್‌ಜಿಟಿ ವಿಚಾರಣೆ ನಡೆಸುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಕ್ರೀಡಾಂಗಣದಲ್ಲಿ ಬಳಸುತ್ತಿರುವ ನೀರಿನ ಮೂಲದ ಬಗ್ಗೆ ಮಾಹಿತಿ ಸಲ್ಲಿಸುವಂತೆಯೂ ಈ ಹಿಂದೆಯೇ ನಿರ್ದೇಶಿಸಲಾಗಿದೆ.
ಹೈದರಾಬಾದ್‌ನ ಕ್ರೀಡಾಂಗಣದ ಆಡಳಿತವು ಪ್ರತಿಕ್ರಿಯೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ಕೋರಿದ್ದು, ಉಳಿದ ಆರು ಕ್ರೀಡಾಂಗಣಗಳ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದನ್ನು ಎನ್‌ಜಿಟಿ ಪೀಠ ಗಮನಿಸಿ, ಈಗ ನೋಟಿಸ್ ಜಾರಿಗೊಳಿಸಿದೆ.
ನೋಟಿಸ್ ಪಡೆದಿರುವ ಕ್ರೀಡಾಂಗಣಗಳ ಪೈಕಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ, ರಾಯಪುರದ ಶಾಹೀದ್ ವೀರ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣ, ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣ, ಮುಂಬೈನ ಡಾ.ಡಿ.ವೈ. ಪಾಟೀಲ್ ಕ್ರೀಡಾಂಗಣ, ಲಖನೌನ ಭಾರತ ರತ್ನಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಮತ್ತು ಒಡಿಶಾದ ಬಾರಾಬತಿ ಕ್ರೀಡಾಂಗಣವೂ ಸೇರಿವೆ.

