ಜೆರುಸಲೇಮ್: ದಕ್ಷಿಣ ಲೆಬನಾನ್‌ನಲ್ಲಿ ಯೇಸು ಕ್ರಿಸ್ತರ ಪ್ರತಿಮೆಯೊಂದನ್ನು ಧ್ವಂಸಗೊಳಿಸಿದ ಸೈನಿಕನ ವಿರುದ್ಧ ''ಕಠಿಣ ಕ್ರಮ'' ತೆಗೆದುಕೊಳ್ಳುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದಾರೆ.
ಇಸ್ರೇಲ್ ಸೈನಿಕನೊಬ್ಬ ಶಿಲುಬೆಯಿಂದ ಕೆಳಗೆ ಬಿದ್ದಿರುವ ಯೇಸು ಕ್ರಿಸ್ತರ ಪ್ರತಿಮೆಯ ತಲೆಗೆ ದೊಡ್ಡ ಸುತ್ತಿಗೆಯಿಂದ ಬಡಿಯುವುದನ್ನು ತೋರಿಸುವ ಪೋಟೊವೊಂದು ವೈರಲ್ ಆಗಿದೆ.
''ಇಸ್ರೇಲ್ ರಕ್ಷಣಾ ಪಡೆಯ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಕ್ಯಾಥೊಲಿಕ್ ಧಾರ್ಮಿಕ ಸಂಕೇತವೊಂದಕ್ಕೆ ಹಾನಿ ಮಾಡಿದ್ದಾನೆ ಎನ್ನುವ ವಿಷಯವನ್ನು ಕೇಳಿ ನನಗೆ ಆಘಾತ ಮತ್ತು ಬೇಸರವಾಗಿದೆ. ನಾನು ಇದನ್ನು ಕಟುವಾಗಿ ಖಂಡಿಸುತ್ತೇನೆ. ಸೇನಾಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಪರಾಧಿಯ ವಿರುದ್ಧ ಸೂಕ್ತ ಕಠಿಣ ಶಿಸ್ತು ಕ್ರಮವನ್ನು ಅವರು ತೆಗೆದುಕೊಳ್ಳಲಿದ್ದಾರೆ'' ಎಂದು ನೆತನ್ಯಾಹು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.

