ಲಂಡನ್: ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಫೆಲೆಸ್ತೀನ್ ಜನತೆಗೆ ಬೆಂಬಲ ವ್ಯಕ್ತಪಡಿಸಿರುವ ಶೈಕ್ಷಣಿಕ ವ್ಯಕ್ತಿಗಳ ಮೇಲೆ ನಿಗಾ ಇಡಲು ಮಾಜಿ ಸೇನಾ ಬೇಹುಗಾರಿಕಾ ಅಧಿಕಾರಿಗಳು ನಡೆಸುವ ಖಾಸಗಿ ಸಂಸ್ಥೆಯೊಂದಕ್ಕೆ ಹನ್ನೆರಡು ಬ್ರಿಟಿಷ್ ವಿಶ್ವವಿದ್ಯಾನಿಲಯಗಳು ಹಣ ಪಾವತಿಸಿವೆ ಎನ್ನುವುದು ಬಹಿರಂಗವಾಗಿದೆ.
ಬ್ರಿಟನ್‌ನ ಕೆಲವು ಅತ್ಯುನ್ನತ ವಿಶ್ವವಿದ್ಯಾನಿಲಯಗಳ ಪರವಾಗಿ ಹೋರಸ್ ಸೆಕ್ಯುರಿಟಿ ಕನ್ಸಲ್ಟೆನ್ಸಿ ಲಿಮಿಟೆಡ್ ಎಂಬ ಬೇಹುಕಾರಿಕಾ ಸಂಸ್ಥೆಯು ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಜಾಲಾಡಿವೆ ಹಾಗೂ ಅವರನ್ನು ಭಯೋತ್ಪಾದನೆ-ನಿಗ್ರಹ ಬೆದರಿಕೆ ವಿಶ್ಲೇಷಣೆಗೆ ರಹಸ್ಯವಾಗಿ ಒಳಪಡಿಸಿವೆ ಎನ್ನುವುದನ್ನು ಅಲ್ ಜಝೀರ ಇಂಗ್ಲಿಷ್ ಮತ್ತು ಲಿಬರ್ಟಿ ಇನ್ವೆಸ್ಟಿಗೇಟ್ಸ್ ನಡೆಸಿದ ಜಂಟಿ ತನಿಖೆಯಲ್ಲಿ ಪತ್ತೆಯಾಗಿದೆ.
ತನ್ನನ್ನು ''ಪ್ರಮುಖ ಬೇಹುಗಾರಿಕಾ'' ಸಂಸ್ಥೆ ಎಂಬುದಾಗಿ ಕರೆದುಕೊಳ್ಳುವ ಹೋರಸ್‌ಗೆ ಈ ವಿಶ್ವವಿದ್ಯಾಲಯಗಳು 2022ರಿಂದ ಕನಿಷ್ಠ 4,40,000 ಪೌಂಡ್ (ಸುಮಾರು 5.53 ಕೋಟಿ ರೂಪಾಯಿ) ಪಾವತಿಸಿವೆ.
ಬೇಹುಗಾರಿಕೆಗೆ ಒಳಗಾದವರಲ್ಲಿ ಮ್ಯಾಂಚೆಸ್ಟರ್ ಮೆಟ್ರೊಪಾಲಿಟನ್ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸ ನೀಡಲು ಆಹ್ವಾನಿತರಾಗಿದ್ದ ಓರ್ವ ಫೆಲೆಸ್ತೀನ್ ಶೈಕ್ಷಣಿಕ ವ್ಯಕ್ತಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಸೇರಿದ್ದಾರೆ.
2024 ಅಕ್ಟೋಬರ್‌ನಲ್ಲಿ, ಬ್ರಿಸ್ಟಲ್ ವಿಶ್ವವಿದ್ಯಾನಿಲಯವು ಬೇಹುಗಾರಿಕಾ ಸಂಸ್ಥೆಗೆ ವಿದ್ಯಾರ್ಥಿ ಪ್ರತಿಭಟನಾ ಗುಂಪುಗಳ ಪಟ್ಟಿಯೊಂದನ್ನು ಕೊಟ್ಟು, ಅವರ ನಡೆಗಳ ಬಗ್ಗೆ ಮಾಹಿತಿಗಳನ್ನು ನೀಡುವಂತೆ ಕೊರಿತ್ತು ಎನ್ನುವುದನ್ನು ವಿಶ್ವವಿದ್ಯಾಲಯದ ಆಂತರಿಕ ಇಮೇಲ್ ವೊಂದು ತಿಳಿಸಿದೆ.
ವಿದ್ಯಾರ್ಥಿಗಳ ಕ್ಯಾಂಪಸ್ ಪ್ರತಿಭಟನಾ ಚಟುವಟಿಕೆಗಳ ಬಗ್ಗೆ ಮುನ್ನೆಚ್ಚರಿಕಾ ಮಾಹಿತಿಗಳನ್ನು ಪಡೆಯಲು ಒಟ್ಟು 12 ವಿಶ್ವವಿದ್ಯಾನಿಲಯಗಳು ಬೇಹುಗಾರಿಕಾ ಸಂಸ್ಥೆಗೆ ಹಣ ನೀಡಿರುವುದು ಪತ್ತೆಯಾಗಿದೆ.
ಬೇಹುಗಾರಿಕೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಇಂಪೀರಿಯಲ್ ಕಾಲೇಜ್ ಲಂಡನ್, ವಿಶ್ವವಿದ್ಯಾಲಯ ಕಾಲೇಜ್ ಲಂಡನ್ (ಯುಸಿಎಲ್), ಕಿಂಗ್ಸ್ ಕಾಲೇಜ್ ಲಂಡನ್ (ಕೆಸಿಎಲ್), ಶೆಫೀಲ್ಡ್ ವಿಶ್ವವಿದ್ಯಾಲಯ, ಲೀಸೆಸ್ಟರ್ ವಿಶ್ವವಿದ್ಯಾಲಯ, ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯ ಮತ್ತು ಕಾರ್ಡಿಫ್ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯ ಹಣ ನೀಡಿರುವ ಇತರ ವಿಶ್ವವಿದ್ಯಾಲಯಗಳಾಗಿದೆ ಎಂದು ವರದಿಯು ತಿಳಿಸಿದೆ.

