ಚೆನ್ನೈ: ತಮಿಳುನಾಡಿನ ತಿರುನಲ್ವೇಲಿಯ ಪೆರುಂಪತು ಗ್ರಾಮದ ನಂಗುನೆರಿಯಲ್ಲಿರುವ ಮತಗಟ್ಟೆಯಲ್ಲಿ ಮತವೇ ಚಲಾವಣೆಯಾಗಿಲ್ಲ. ಕಳೆದ ವರ್ಷ ಮಾರ್ಚ್ನಲ್ಲಿ ದಲಿತ ಯುವಕ ಹಾಗೂ ವಲಸೆ ಕಾರ್ಮಿಕನ ಹತ್ಯೆ ನಡೆದಿತ್ತು. ಈ ಘಟನೆಗಳ ಹಿನ್ನಲೆಯಲ್ಲಿ ಇಲ್ಲಿನ ಜನರು ವಿಧಾನ ಸಭೆ ಚುನಾವಣೆ ಬಹಿಷ್ಕರಿಸಿದ್ದಾರೆ.
ಈ ಗ್ರಾಮದಲ್ಲಿ 974ಕ್ಕೂ ಅಧಿಕ ಮತದಾರರು ವಾಸಿಸುತ್ತಿದ್ದಾರೆ. ತಮ್ಮೊಂದಿಗೆ ಯಾವುದೇ ಅಧಿಕಾರಿಗಳು ಈ ಬಗ್ಗೆ ಮಾತುಕತೆಗೆ ಬಂದಿಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.
ಮತಗಟ್ಟೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ಗೆ ಇರಿತ:
ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಪೂಂಪುಹಾರ್ ವಿಧಾನ ಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸಲು ನಿಯೋಜಿತರಾಗಿದ್ದ ಹೆಡ್ ಕಾನ್ಸ್ಟೇಬಲ್ ಓರ್ವರಿಗೆ ನಿವೃತ್ತ ಯೋಧರೋರ್ವರು ಇರಿದಿದ್ದಾರೆ. ಇದರಿಂದ ಇಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಗಾಯಗೊಂಡ ಹೆಡ್ ಕಾನ್ಸ್ಟೇಬಲ್ನನ್ನು ವಿಘ್ನೇಶ್ ಎಂದು ಗುರುತಿಸಲಾಗಿದೆ. ಇವರು ಕುತಾಲಂ ಪೊಲೀಸ್ ಠಾಣೆಯ ಸಿಬ್ಬಂದಿ. ದಾಳಿಯಿಂದ ವಿಘ್ನೇಶ್ಗೆ ಕುತ್ತಿಗೆ ಹಾಗೂ ಎರಡೂ ಕೈಗಳಿಗೆ ಗಾಯಗಳಾಗಿವೆ. ಆರೋಪಿಯನ್ನು ಕುಟ್ಟಚ್ಚೇರಿಯ ಪ್ರಭಾಕರನ್ ಎಂದು ಗುರುತಿಸಲಾಗಿದೆ.
ಮತಗಟ್ಟೆಯಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದ ವಿಘ್ನೇಶ್ಗೆ ಪ್ರಭಾಕರನ್ ತಾನು ತಂದಿದ್ದ ಸ್ಕ್ರೂಡ್ರೈವರ್ನಿಂದ ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊರಯಾರ್ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

