ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ನಾಳೆಗೆ (ಏಪ್ರಿಲ್ 22) ಒಂದು ವರ್ಷ. ಆದರೆ ವರ್ಷ ಕಳೆದರೂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಮಾತ್ರ ಇನ್ನೂ ಹಸಿಯಾಗಿಯೇ ಉಳಿದಿದೆ.
ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ, ವರ್ಷ ಕಳೆದರೂ ನಮ್ಮ ಜೀವನದಲ್ಲಿ ತುಂಬಲಾರದ ಶೂನ್ಯ ಹಾಗೆಯೇ ಇದೆ.
ಸರ್ಕಾರಿ ನೆರವು ಮತ್ತು ಭರವಸೆಗಳು ಸಿಕ್ಕಿರಬಹುದು, ಆದರೆ ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಯಾವುದರಿಂದಲೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಸಂತ್ರಸ್ತರು ಕಣ್ಣೀರಿಟ್ಟಿದ್ದಾರೆ.
'ನನ್ನ ಕೊನೆಯ ಉಸಿರಿರುವವರೆಗೆ ಆ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ' ಎಂದು ದಾಳಿಯಲ್ಲಿ ಮೃತಪಟ್ಟ ಕೌಸ್ತುಭ್ ಗಣಬೋಟೆ ಅವರ ಪತ್ನಿ ಸಂಗೀತಾ ಕಣ್ಣೀರು ಹಾಕಿದರು.
ಪಹಲ್ಗಾಮ್ ಉಗ್ರ ದಾಳಿ ಸಂತ್ರಸ್ತ ಸೇರಿ 56 ಮಂದಿಗೆ ಜಮ್ಮು ಸರ್ಕಾರದ ಪ್ರಶಸ್ತಿಪಹಲ್ಗಾಮ್ ದಾಳಿ: 1597 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ
' ಆ ಒಂದು ಘಟನೆ ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡ್ತು. ಕುಟುಂಬದ ಆಧಾರಸ್ತಂಭವನ್ನೇ ಹೇಗೆ ಕಸಿದುಕೊಂಡಿತು' ಎಂದು ದಾಳಿಯಲ್ಲಿ ಹತ್ಯೆಗೀಡಾದ ಪ್ರಶಾಂತ್ ಅವರ ಪತ್ನಿ ಪ್ರಿಯದರ್ಶನಿ ಆಚಾರ್ಯ ಅಳಲು ತೋಡಿಕೊಂಡರು.
ದಾಳಿಯ ಸಂಚು ರೂಪಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬಗಳು ಒತ್ತಾಯಿಸಿವೆ. ಭಯೋತ್ಪಾದನೆಯು ಕೇವಲ ವ್ಯಕ್ತಿಗಳನ್ನು ಕೊಲ್ಲುವುದಿಲ್ಲ, ಬದಲಾಗಿ ಇಡೀ ಕುಟುಂಬದ ಭವಿಷ್ಯವನ್ನೇ ನಾಶಪಡಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಅಮಾಯಕರ ಪ್ರಾಣ ಪಕ್ಷಿ ಹಾರಿಹೋಗಿತ್ತು. 26 ಮಂದಿ ಮೃತಪಟ್ಟಿದ್ದರೆ, ಕೆಲವರಿಗೆ ಗಾಯಗಳಾಗಿದ್ದವು.
ಈ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮಿರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ 100ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಯಿತು.

