ಕುಂಬಳೆ: ಪಂಚಾಯತಿ ಆಡಳಿತ ಸಮಿತಿಯ ಏಕಪಕ್ಷೀಯ ತೀರ್ಮಾನಗಳು ಕುಂಬಳೆಯಲ್ಲಿ ಖಾಸಗಿ ಬಸ್ ಸಂಚಾರ ವ್ಯವಸ್ಥೆಯನ್ನು ನಿಶ್ಚಲಗೊಳಿಸಿದೆಯೆಂದು ದೂರಲಾಗಿದೆ.
ಕಳೆದ ಪಂಚಾಯತಿ ಆಡಳಿತ ಸಮಿತಿ ಪೇಟೆಯಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಕುಂಬಳೆಯಿಂದ ವಿವಿಧ ಭಾಗಗಳಿಗೆ ಸಂಚಾರ ನಡೆಸುವ ಬಸ್ ಗಳಿಗೆ ಪೇಟೆಯ ವಿವಿಧ ಭಾಗಗಳಲ್ಲಿ ಶೆಲ್ಟರ್ ನಿರ್ಮಿಸಿ ನೀಡಿತ್ತು. ಅಂದು ಅದರ ವಿರುದ್ಧ ವಿವಿಧ ಮೂಲಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೂ ಆಡಳಿತ ಸಮಿತಿ ಕೈಗೊಂಡ ತೀರ್ಮಾನದಲ್ಲಿ ದೃಢವಾಗಿ ನೂತನ ಕ್ರಮಗಳನ್ನು ಜಾರಿಗೆ ತರಲಾಗಿತ್ತು. ಬಳಿಕ ಪಂಚಾಯತಿ ಚುನಾವಣೆ ಕಳೆದ ಕೂಡಲೇ ಅಂದಿನ ಪಂಚಾಯತಿ ತೀರ್ಮಾನದ ವಿರುದ್ಧ ಪ್ರತಿಕ್ರಿಯಿಸಿದವರು ಮತ್ತೆ ಮನವಿಯೊಂದಿಗೆ ಹೊಸ ಆಡಳಿತ ಸಮಿತಿಯನ್ನು ಸಮೀಪಿಸಿದ್ದು, ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಬಸ್ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಬೇಕಾಗಿದ್ದ ಬಸ್‍ಗಳನ್ನು ಕುಂಬಳೆಯಲ್ಲಿ ಹಿಂದೆ ಇದ್ದ ಬಸ್ ನಿಲ್ದಾಣದಲ್ಲಿ ಪಾರ್ಕ್ ಮಾಡಬಹುದೆಂದು ತೀರ್ಮಾನಿಸಲಾಗಿದೆಯೆಂದು ಹೇಳಲಾಗುತ್ತಿದೆ. ಪಂಚಾಯತಿ ಆಡಳಿತ ಸಮಿತಿಯಲ್ಲಿನ ಒಂದು ವಿಭಾಗ ಹಾಗೂ ವ್ಯಾಪಾರಿಗಳು ಸೇರಿ ಈ ತೀರ್ಮಾನ ಕೈಗೊಂಡಿರುವುದಾಗಿ ಹೇಳಲಾಗಿದೆ. ಈ ತೀರ್ಮಾನ ಸಭೆಯಲ್ಲಿ ಬಸ್ ಮಾಲಕರನ್ನು, ಪ್ರಯಾಣಿಕರ ಪ್ರತಿನಿಧಿಗಳನ್ನು, ಪೋಲೀಸರನ್ನು ಪಾಲ್ಗೊಳಿಸಲಾಗಿಲ್ಲವೆಂದು ಹೇಳಲಾಗಿದೆ. ಆದ್ದರಿಂದ ಪಂಚಾಯತಿ ತೀರ್ಮಾನವನ್ನು ಬಸ್ ಮಾಲಕರು ತಿರಸ್ಕರಿಸಿರುವುದಾಗಿ ಹೇಳಲಾಗಿದೆ.
ಈ ಮಧ್ಯೆ ಮಂಗಳವಾರ ವ್ಯಾಪಾರಿ ಯೂತ್ ವಿಂಗ್ ಸದಸ್ಯರ ಒಂದು ತಂಡ ಸೀತಾಂಗೋಳಿಯಿಂದ ಬಸ್‍ಗೆ ಹತ್ತಿ ಕುಂಬಳೆ ಬಸ್ ನಿಲ್ದಾಣಕ್ಕೆ ಟಿಕೆಟ್ ತೆಗೆದಿದ್ದು, ಬಸ್ ಕುಂಬಳೆ ಸಹಕಾರಿ ಆಸ್ಪತ್ರೆ ಬಳಿ ನಿಂತಾಗ ಕುಂಬಳೆ ಬಸ್ ನಿಲ್ದಾಣದವರೆಗೆ ಸಂಚರಿಸಬೇಕೆಂದು ಹಠಹಿಡಿದು ಗಲಾಟೆ ಮಾಡಿದರೆನ್ನಲಾಗಿದೆ. ಇದರಿಂದ ಜನ ಸೇರಿದ್ದು, ಎಲ್ಲಾ ಬಸ್ ಸಂಚಾರ ಮೊಟಕುಗೊಳಿಸಲಾಯಿತು. ಬಸ್‍ಗಳನ್ನು ಸುಗಮವಾಗಿ ನಿಲ್ಲಿಸಲು, ತಿರುಗಿಸಲು, ಕಾರ್ಮಿಕರ ಪ್ರಾಥಮಿಕ ಸೌಕರ್ಯ ಏರ್ಪಡಿಸಿರುವ ಸುಸಜ್ಜಿತ ಬಸ್ ನಿಲ್ದಾಣ ಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.
ದಿನಕ್ಕೊಂದರಂತೆ ತೀರ್ಮಾನ ಬದಲಿಸುತ್ತಾ ಕಂಡಕಂಡಲ್ಲಿಗೆ ಬಸ್ ನಿಲ್ದಾಣವನ್ನು ಬದಲಿಸಿದರೆ ಅದಕ್ಕನುಸಾರವಾಗಿ ಬಸ್ ಓಡಿಸಲು ಸಾಧ್ಯವಿಲ್ಲವೆಂದು ಬಸ್ ಕಾರ್ಮಿಕರು ಮುನ್ನೆಚ್ಚರಿಕೆ ನೀಡಿದ್ದಾರೆ. ಬಸ್ ಕಾರ್ಮಿಕರ ನಿಲುವನ್ನು ಆಟೋ ರಿಕ್ಷಾ ಚಾಲಕರು ಕೂಡಾ ಬೆಂಬಲಿಸಿದ್ದಾರೆ.

.jpg)
.jpg)
