ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ಜೋಸೆಫ್ ವಿಜಯ್ ಅವರು ಇಂದು (ಶುಕ್ರವಾರ) ಚೆನ್ನೈನ ಲೋಕ ಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಕೋರಿದ್ದಾರೆ. ಎಡಪಕ್ಷಗಳ ಬೆಂಬಲ ಸಿಕ್ಕ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸರ್ಕಾರ ರಚನೆಗೆ ಈಗಾಗಲೇ ಹಕ್ಕು ಮಂಡಿಸಿರುವ ವಿಜಯ್, ರಾಜ್ಯಪಾಲರೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳಲ್ಲಿ ಗೆದ್ದಿದ್ದ ಟಿವಿಕೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ (118) ಸಾಬೀತುಪಡಿಸಲು ರಾಜ್ಯಪಾಲರ ಮುಂದೆ ವಿಫಲವಾಗಿತ್ತು.
ಸರ್ಕಾರ ರಚಿಸಲು ಎರಡೆರಡು ಸಲ ರಾಜ್ಯಪಾಲರನ್ನು ಭೇಟಿಯಾದರೂ ಬಹುಮತಕ್ಕೆ ಬೇಕಾದ ಸಂಖ್ಯಾಬಲ ಇಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿತ್ತು.
ಐದು ಶಾಸಕರನ್ನು ಹೊಂದಿದ ಕಾಂಗ್ರೆಸ್, ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದ್ದು, ಟಿವಿಕೆಗೆ ಬೆಂಬಲ ಘೋಷಿಸಿತ್ತು. ಇಂದು ಎಡಪಕ್ಷಗಳಾದ ಸಿಪಿಐ ಹಾಗೂ ಸಿಪಿಐ(ಎಂ), ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ವಿಜಯ್ ಅವರು ಸಿಪಿಐ ರಾಜ್ಯ ಪ್ರಧಾನ ಕಚೇರಿಗೆ ಭೇಟಿ ನೀಡಿ ನಾಯಕರ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ.
ಡಿಎಂಕೆ ಮಿತ್ರಪಕ್ಷವಾಗಿದ್ದ ವಿಸಿಕೆ ಇಬ್ಬರು ಶಾಸಕರನ್ನು ಹೊಂದಿದ್ದು, ಶನಿವಾರ ತನ್ನ ನಿರ್ಧಾರ ಪ್ರಕಟಿಸಲಿದೆ. ಒಂದು ವೇಳೆ ವಿಸಿಕೆ ಬೆಂಬಲ ನೀಡಿದರೆ ವಿಜಯ್ ಮೈತ್ರಿಕೂಟದ ಬಲ 118ಕ್ಕೆ ಏರಿ ಬಹುಮತ ಲಭಿಸಲಿದೆ.

