ಚೆನ್ನೈ: ತಮಿಳುನಾಡಿನಲ್ಲಿ ಹತ್ತಾರು ತಿರುವುಗಳನ್ನು ಪಡೆದುಕೊಂಡಿದ್ದ ರಾಜಕೀಯ ನಾಟಕ ಅಂತ್ಯದತ್ತ ಸಾಗಿದ್ದು ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಶುಕ್ರವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ವಿಜಯ್ ಹಕ್ಕು ಮಂಡಿಸಿದರು.
ತಮ್ಮ ಬಳಿ ಬಹುಮತಕ್ಕೆ ಅಗತ್ಯವಿರುವ 118 ಶಾಸಕರ ಬೆಂಬಲವಿದೆ ಎಂದು ಅವರು ಘೋಷಿಸಿದ್ದಾರೆ.
ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಾಳೆ (ಶನಿವಾರ) ಬೆಳಿಗ್ಗೆ 11 ಗಂಟೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಆದರೆ, ರಾಜಭವನದಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಸತತ ಎರಡು ದಿನಗಳಿಂದ ರಾಜ್ಯಪಾಲರು ಲಿಖಿತ ಬೆಂಬಲ ಪತ್ರ ನೀಡುವಂತೆ ಪಟ್ಟು ಹಿಡಿದಿದ್ದರು. ಕೊನೆಗೂ ವಿಜಯ್ ಅಗತ್ಯ ಸಂಖ್ಯೆಯ ಬೆಂಬಲದೊಂದಿಗೆ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇಂದು ಬೆಳಿಗ್ಗೆಯಷ್ಟೇ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವದಂತಿಗಳು ಹರಡಿದ್ದವು. ಆದರೆ ಮಧ್ಯಾಹ್ನದ ವೇಳೆಗೆ ರಾಜಕೀಯ ಚಿತ್ರಣ ಬದಲಾಗಿ ಟಿವಿಕೆ ತನ್ನ ಬಳಿ ಬಹುಮತವಿದೆ ಎಂದು ಸ್ಪಷ್ಟನೆ ನೀಡಿತು. ಸಂಜೆ ವೇಳೆಗೆ ವಿಜಯ್ ಅವರೇ ಖುದ್ದಾಗಿ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಯ ದಾಳ ಉರುಳಿಸಿದರು.
ಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡಿರುವ ಕಾಂಗ್ರೆಸ್ನ ಐವರು ಶಾಸಕರು ಟಿವಿಕೆಗೆ ಬೆಂಬಲ ಸೂಚಿಸಿದ್ದಾರೆ. ಕೋಮುವಾದಿ ಶಕ್ತಿಗಳೊಂದಿಗೆ (ಬಿಜೆಪಿ) ಮೈತ್ರಿ ಮಾಡಿಕೊಳ್ಳಬಾರದು ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ಈ ಬೆಂಬಲ ನೀಡಿದೆ ಎನ್ನಲಾಗಿದೆ.
ಮ್ಯಾಜಿಕ್ ನಂಬರ್: 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ನ 5, ಎಡ ಪಕ್ಷಗಳ ನಾಲ್ವರು ಶಾಸಕರು ಮತ್ತು ವಿಸಿಕೆ ಪಕ್ಷದ ಇಬ್ಬರು ಶಾಸಕರ ಬೆಂಬಲದೊಂದಿಗೆ ವಿಜಯ್ ಬಹುಮತ ಸಾಧಿಸಿದ್ದಾರೆ.

