ವಾಷಿಂಗ್ಟನ್: ಜಾಗತಿಕ ಸಾಮಾಜಿಕ ಮಾಧ್ಯಮ ಸಂಸ್ಥೆ, ಮೆಟಾ 8,000 ಉದ್ಯೋಗಿಗಳು, ಅಂದರೆ ಕಂಪನಿಯ ಸುಮಾರು ಶೇ 10 ರಷ್ಟು ಉದ್ಯೋಗಿಗಳನ್ನು ಮೇ 20ರಂದು (ಬುಧವಾರ) ವಜಾಗೊಳಿಸಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ತಂತ್ರಜ್ಞಾನ ದೈತ್ಯ ಕಂಪನಿಯು ಕೃತಕ ಬುದ್ಧಿಮತ್ತೆ ಯುಗಕ್ಕೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿ ತಿಳಿಸಿದೆ.
ಸಿಂಗಪುರದಲ್ಲಿ ಆದೇಶ ಕಾರ್ಯಗತಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಬುಧವಾರ ಸ್ಥಳೀಯ ಸಮಯ ಬೆಳಿಗ್ಗೆ 4 ಗಂಟೆ ಸುಮಾರಿಗೆ ಕೆಲಸದಿಂದ ವಜಾಗೊಳಿಸಲಾಗುತ್ತಿರುವ ಕುರಿತಂತೆ ಕಾರ್ಮಿಕರಿಗೆ ಇಮೇಲ್ ಹೋಗಿವೆ. ಬ್ರಿಟನ್, ಅಮೆರಿಕ ಮತ್ತು ಇತರೆಡೆಗಳಲ್ಲಿನ ಉದ್ಯೋಗಿಗಳಿಗೂ ಅಲ್ಲಿನ ಕಾಲಮಾನಕ್ಕೆ ತಕ್ಕಂತೆ ಬುಧವಾರ ಮುಂಜಾನೆ ತಿಳಿಸಲಾಗುತ್ತದೆ.
ಇನ್ನೂ 7,000 ಉದ್ಯೋಗಿಗಳನ್ನು ಹೊಸ ಎಯ ಉಪಕ್ರಮಗಳಿಗೆ ಮರು ನಿಯೋಜಿಸಲಾಗುವುದು ಎಂದು ಅದು ತಿಳಿಸಿದೆ. ಪ್ರಸ್ತುತ ಮಾನವರು ನಿರ್ವಹಿಸುವ ಕಾರ್ಯಗಳನ್ನು ನಿರ್ವಹಿಸಬಲ್ಲ ಎಐ ಏಜೆಂಟ್ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಜನೆಲ್ ಗೇಲ್ ಈ ವಾರ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಬೇಕೆಂದು ಹೇಳಿದ್ದಾರೆ. ಅದರ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ.

