ರಾಜ್ಸಮಂದ್: ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿ ಅಕ್ರಮವಾಗಿ ಖಡ್ಗ ತಯಾರಿಸುತ್ತಿದ್ದ ಕಾರ್ಖಾನೆಯನ್ನು ಪೊಲೀಸರು ಭೇದಿಸಿ, 9,032ಕ್ಕೂ ಹೆಚ್ಚು ಆಯುಧಗಳು ಹಾಗೂ ತಯಾರಿಕಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.
ನತ್ದ್ವಾರ ನಗರದಲ್ಲಿನ ಗುಜರಿ ಗೋದಾಮೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಖಡ್ಗಗಳನ್ನು ತಯಾರಿಸಿ ಸಂಗ್ರಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶ್ರೀನಾಥ್ಜಿ ದೇವಾಲಯ ಠಾಣೆ ಪೊಲೀಸರು ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದರು.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಉಪ್ಲಿ ಉದಾನ್ ಪ್ರದೇಶದಲ್ಲಿರುವ ಗುಜರಿ ಗೋದಾಮಿನೊಳಗೆ ಅಕ್ರಮವಾಗಿ ತಯಾರಿಸಲಾದ ಆಯುಧಗಳನ್ನು ಸಂಗ್ರಹಿಸಿಡಲಾಗುತ್ತಿತ್ತು. ತಪಾಸಣೆ ವೇಳೆ ಪೊಲೀಸರು 9,032 ಖಡ್ಗಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಕೆಲವು ಖಡ್ಗಗಳನ್ನು ಹರಿತಗೊಳಿಸಿ ಸಂಪೂರ್ಣವಾಗಿ ಸಿದ್ಧಪಡಿಸಲಾಗಿದ್ದರೆ, ಇನ್ನೂ ಕೆಲವು ಆಯುಧಗಳು ತಯಾರಿಕಾ ಹಂತದಲ್ಲಿದ್ದವು. ಅನೇಕ ಖಡ್ಗಗಳನ್ನು ಬಹಿರಂಗವಾಗಿಯೇ ರಾಶಿ ಮಾಡಿ ಇರಿಸಲಾಗಿತ್ತು.
ಗೋದಾಮಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದ ಆಯುಧಗಳು ಸಂಗ್ರಹವಾಗಿರುವುದು ಸ್ಥಳದಲ್ಲಿನ ವೀಡಿಯೊ ದೃಶ್ಯಾವಳಿಗಳಲ್ಲೂ ಕಂಡುಬಂದಿದೆ. ಅಲ್ಲದೆ, ತಯಾರಿಕೆಗೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳು ಹಾಗೂ ನಿರುಪಯೋಗಿ ಸಾಮಗ್ರಿಗಳೂ ಪತ್ತೆಯಾಗಿವೆ.
ಗೋದಾಮಿನಲ್ಲಿ ಪತ್ತೆಯಾದ ಅಜಯ್ ಸಿಕ್ಲಿಗರ್ ಹಾಗೂ ಸೋನು ಸೂದರ್ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಮಾನ್ಯ ದಾಖಲೆಗಳನ್ನು ಪೊಲೀಸರಿಗೆ ಒದಗಿಸಲು ವಿಫಲರಾದ ಹಿನ್ನೆಲೆಯಲ್ಲಿ, ಅವರನ್ನು ಬಂಧಿಸಲಾಗಿದೆ.
ಇದೇ ವೇಳೆ ಮತ್ತೊಂದು ದಾಳಿಯಲ್ಲಿ ವೆಲ್ಡಿಂಗ್ ಅಂಗಡಿಯ ಹೊರಭಾಗದಲ್ಲಿ ಅಕ್ರಮವಾಗಿ ಖಡ್ಗ ತಯಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ಅಲ್ಲಿಂದ ಸುಮಾರು 196 ಖಡ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸಿಕಂದರ್ ಸಿಲಿಗರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಿಸಿಕೊಂಡಿರುವ ಪೊಲೀಸರು, ಆಯುಧಗಳ ಪೂರೈಕೆ ಜಾಲ ಹಾಗೂ ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.

