ಕೋಲ್ಕತ್ತ: 'ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗ ನುಸುಳುವಿಕೆ, ಗೋವು ಕಳ್ಳಸಾಗಣೆ ಅಸಾಧ್ಯ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಬಿಜೆಪಿ ಶಾಸಕಾಂಗ ನಾಯಕರಾಗಿ ಸುವೇಂದು ಅಧಿಕಾರಿ ಅವರನ್ನು ಅಮಿತ್ ಶಾ ಘೋಷಿಸಿದ್ದಾರೆ.
ಅಲ್ಲದೆ ಸುವೇಂದು ಅಧಿಕಾರಿ ಬಂಗಾಳದಲ್ಲಿ ಬಿಜೆಪಿಯ ಮೊದಲ ಮುುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಳಿಕ ಮಾತನಾಡಿದ ಅಮಿತ್ ಶಾ, 'ಬಂಗಾಳದಲ್ಲಿ ದೊರಕಿದ ಅಭೂತಪೂರ್ವ ಗೆಲುವು ಸಂಘಟನೆಯ ಶಕ್ತಿ ಹಾಗೂ ಸಿದ್ಧಾಂತಕ್ಕಷ್ಟೇ ಸೀಮಿತವಲ್ಲ. ಬದಲಾಗಿ ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವದ ಪುನಃಸ್ಥಾಪನೆಗಾಗಿ ದೊರಕಿದ ಜನಾದೇಶವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ಟಿಎಂಸಿ ಮೇಲೆ ವಾಗ್ದಾಳಿ ನಡೆಸಿರುವ ಅಮಿತ್ ಶಾ, 'ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತದಲ್ಲಿ ರಾಜಕೀಯ ಧ್ರುವೀಕರಣ ಹಾಗೂ ಅಪರಾಧೀಕರಣ ರಾರಾಜಿಸುತ್ತಿತ್ತು. ಆದರೆ ಬಿಜೆಪಿಯು ಆಡಳಿತವನ್ನು ರಾಜಕೀಯಗೊಳಿಸುವುದಿಲ್ಲ ಅಥವಾ ಅಪರಾಧೀಕರಣಗೊಳಿಸುವುದಿಲ್ಲ' ಎಂದು ಭರವಸೆ ನೀಡಿದ್ದಾರೆ.
'ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲರೂ ಒಂದೇ ಹೆಸರನ್ನೇ ಸೂಚಿಸಿದ್ದರು. ಆದ್ದರಿಂದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರನ್ನು ಆರಿಸಲಾಯಿತು' ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಂಗಾಳದ ಜನರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಅಮಿತ್ ಶಾ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
'ಕಮ್ಯುನಿಸ್ಟ್ ಕಾಲದಿಂದಲೂ ಇಲ್ಲಿ ಸೃಷ್ಟಿಯಾಗಿದ್ದ ಪ್ರಕ್ಷುಬ್ಧ ವಾತಾವರಣ ಮಮತಾ ಆಡಳಿತದಲ್ಲೂ ಮುಂದುವರಿದಿತ್ತು. ನೂರಾರು ಹಿಂಸಾಚಾರ ಹಾಗೂ ಕ್ರೂರ ಘಟನೆಗಳ ಹೊರತಾಗಿಯೂ ಬಂಗಾಳದ ಜನರು ಬಿಜೆಪಿ ಹಾಗೂ ನಮ್ಮ ನಾಯಕ ನರೇಂದ್ರ ಮೋದಿ ಮೇಲೆ ನಂಬಿಕೆಯನ್ನಿಟ್ಟು ಗೆಲುವು ತಂದು ಕೊಟ್ಟಿದ್ದಾರೆ' ಎಂದು ಹೇಳಿದ್ದಾರೆ.

