ಇಂಫಾಲ್: ಮಣಿಪುರದ ವಿಷ್ಣುಪುರ ಜಿಲ್ಲೆಯ ಟ್ರೋಂಗ್ಲಾಬಿಯಲ್ಲಿ ಏಪ್ರಿಲ್ 7ರಂದು ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಇಬ್ಬರು ಮಕ್ಕಳ ಶವಗಳನ್ನು ಕುಟುಂಬದ ಸದಸ್ಯರಿಗೆ ಶನಿವಾರ ಹಸ್ತಾಂತರಿಸಲಾಯಿತು.
ಟ್ರೋಂಗ್ಲಾಬಿಗೆ ಹೋಗುವ ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ನೂರಾರು ಮಂದಿ ಮಕ್ಕಳ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ, ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
'ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿ ಕುಟುಂಬದ ಸದಸ್ಯರು ಮಕ್ಕಳ ಮೃತದೇಹಗಳನ್ನು ಪಡೆಯಲು ನಿರಾಕರಿಸಿದ್ದರು. ಹೀಗಾಗಿ, ಐದು ವರ್ಷದ ಬಾಲಕ ಮತ್ತು ಆತನ ಆರು ತಿಂಗಳ ಸಹೋದರಿಯ ಶವಗಳನ್ನು ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶವಾಗಾರದಲ್ಲಿ ಇರಿಸಲಾಗಿತ್ತು.
ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಮಕ್ಕಳ ಶವಗಳನ್ನು ಸ್ವೀಕರಿಸುವಂತೆ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ಅವರು ಕುಟುಂಬದ ಸದಸ್ಯರಿಗೆ ಏಪ್ರಿಲ್ 25ರಂದು ಮನವಿ ಮಾಡಿದ್ದರು.
ಬಾಂಬ್ ದಾಳಿ ಬಳಿಕ, ಮಣಿಪುರದ ಐದು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ನಂತರ, ಈ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು.

