ಮುಳ್ಳೇರಿಯ : ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದು, ಪುನಃ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿಮಂತ ಬಿಸ್ವ ಶರ್ಮಾ ಅವರು ಕಾಸರಗೋಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಸೋಮವಾರ ಪೆರಿಯ ಗೋಕುಲಂ ಗೋಶಾಲೆಗೆ ಭೇಟಿ ನೀಡಿದರು.
ಕಳೆದ 16 ವರ್ಷಗಳಿಂದ ಅವರು ಬೇಕಲ ಗೋಕುಲಂ ಗೋಶಾಲೆಯ ಅಧಿಪತಿಗಳು ಹಾಗೂ ಪ್ರಖ್ಯಾತ ಜ್ಯೋತಿಷ್ಯ ವಿದ್ವಾಂಸ ವಿಷ್ಣು ಪ್ರಸಾದ್ ಹೆಬ್ಬಾರ್ ಅವರನ್ನು ತಮ್ಮ ಆಧ್ಯಾತ್ಮಿಕ ಗುರುಗಳೆಂದು ಸ್ವೀಕರಿಸಿದ್ದಾರೆ. 2010 ರಲ್ಲಿ ತಮ್ಮ ಜೀವನದ ಅತ್ಯಂತ ಸಂಕೀರ್ಣ ಕಾಲಘಟ್ಟದಲ್ಲಿದ್ದಾಗ, ಮಾರ್ಗದರ್ಶನಕ್ಕಾಗಿ ಶರ್ಮಾ ಅವರು ಮೊದಲ ಬಾರಿಗೆ ವಿಷ್ಣು ಹೆಬ್ಬಾರ್ ಅವರನ್ನು ಭೇಟಿ ಮಾಡಿದ್ದರು. ಅಂದಿನಿಂದ ಹಿಮಂತ ಬಿಸ್ವ ಶರ್ಮಾ ಹಾಗೂ ಹೆಬ್ಬಾರ್ ಅವರ ಕುಟುಂಬಗಳ ನಡುವೆ ಆಪ್ತ ಬಾಂಧವ್ಯ ಬೆಸೆದಿದೆ.
ಅಸ್ಸಾಂನ ಹಲವಾರು ಪುರಾತನ ದೇವಾಲಯಗಳ ಪುನರುದ್ಧಾರ, ಪುನರ್ ಪ್ರತಿಷ್ಠಾಪನೆ ಹಾಗೂ ಅತಿರುದ್ರ ಮಹಾಯಾಗದಂತಹ ಧಾರ್ಮಿಕ ವಿಧಿವಿಧಾನಗಳು ವಿಷ್ಣು ಹೆಬ್ಬಾರ್ ಅವರ ಪೌರೋಹಿತ್ಯ ಮತ್ತು ಮಾರ್ಗದರ್ಶನದಲ್ಲಿ ನೆರವೇರುತ್ತಿವೆ. ಕೇರಳದ ಹಲವಾರು ಶಾಸ್ತ್ರೀಯ ನೃತ್ಯ, ಸಂಗೀತ ಹಾಗೂ ವಾದ್ಯ ಕಲಾವಿದರನ್ನು ಅಸ್ಸಾಂನ ಸಾಂಸ್ಕøತಿಕ ವೇದಿಕೆಗಳೊಂದಿಗೆ ಬೆಸೆಯುವಲ್ಲಿ ಹೆಬ್ಬಾರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಸ್ತುತ ಗೋಶಾಲೆಯಲ್ಲಿ `ವೈಶಾಖ ನಟನಂ' ರಾಷ್ಟ್ರೀಯ ನೃತ್ಯೋತ್ಸವ ನಡೆಯುತ್ತಿರುವುದರಿಂದ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ, ವಿಷ್ಣು ಹೆಬ್ಬಾರ್ ಅವರು ಮೇ 15 ರಂದು ಮುಂಜಾನೆ ಗುವಾಹಟಿಗೆ ಪ್ರಯಾಣಿಸಲಿದ್ದಾರೆ.

.jpg)
.jpg)
