ಬೀಜಿಂಗ್: ತೈವಾನ್ ವಿಷಯವನ್ನು ತಪ್ಪಾಗಿ ನಿರ್ವಹಿಸಿದರೆ ಉಭಯ ದೇಶಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎಚ್ಚರಿಸಿದ್ದಾರೆ.
ಇರಾನ್ ಯುದ್ಧ, ಇಂಧನ ಭದ್ರತೆ ಮತ್ತು ವ್ಯಾಪಾರ ಕುರಿತಂತೆ ಉಭಯ ನಾಯಕರು ವಿಸ್ತೃತ ಚರ್ಚೆ ನಡೆಸಿದ್ಧಾರೆ ಎಂದು ವರದಿ ತಿಳಿಸಿದೆ.
ಜಾಗತಿಕ ಇಂಧನ ಅಗತ್ಯತೆಗಳಿಗಾಗಿ ಹೊರ್ಮುಜ್ ಜಲಸಂಧಿ ತೆರೆಯುವ ಬಗ್ಗೆಯೂ ಉಭಯ ನಾಯಕರು ಒಪ್ಪಂದಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಬೀಜಿಂಗ್ನಲ್ಲಿ ಎರಡು ಗಂಟೆಗಳ ಮೊದಲ ಹಂತದ ಮಾತುಕತೆ ಮುಗಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಷಿ ಜಿನ್ಪಿಂಗ್ ಮತ್ತು ಅವರ ಪತ್ನಿಯನ್ನು ಸೆಪ್ಟೆಂಬರ್ 24ರಂದು ಶ್ವೇತಭವನಕ್ಕೆ ಆಹ್ವಾನಿಸಿದ್ದಾರೆ.
ರಚನಾತ್ಮಕ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಸ ದೃಷ್ಟಿಕೋನಕ್ಕೆ ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಷಿ ಹೇಳಿದ್ದಾರೆ.
'ಹೊಸ ದೃಷ್ಟಿಕೋನ'ವು ಮುಂದಿನ ಮೂರು ವರ್ಷಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ದ್ವಿಪಕ್ಷೀಯ ಸಂಬಂಧಗಳಿಗೆ ಕಾರ್ಯತಂತ್ರದ ಮಾರ್ಗದರ್ಶನವನ್ನು ಒದಗಿಸುತ್ತದೆ. ಎರಡೂ ದೇಶಗಳ ಜನರು ಹಾಗೂ ಅಂತರರಾಷ್ಟ್ರೀಯ ಸಮುದಾಯವು ಇದನ್ನು ಸ್ವಾಗತಿಸಬೇಕು ಎಂದು ಷಿ ಹೇಳಿದರು ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಆದರೆ, ತೈವಾನ್ ವಿಚಾರವು ಚೀನಾ-ಅಮೆರಿಕ ಸಂಬಂಧಗಳಲ್ಲಿ ಪ್ರಮುಖ ವಿಷಯವಾಗಿ ಉಳಿದಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಅದನ್ನು ಸರಿಯಾಗಿ ನಿರ್ವಹಿಸಿದರೆ, ದ್ವಿಪಕ್ಷೀಯ ಸಂಬಂಧದಲ್ಲಿ ಸ್ಥಿರತೆ ಇರುತ್ತದೆ. ಇಲ್ಲದಿದ್ದರೆ, ಎರಡೂ ದೇಶಗಳು ಘರ್ಷಣೆ ಮತ್ತು ಸಂಘರ್ಷಗಳನ್ನು ಎದುರಿಸಬೇಕಾಗಬಹುದು. ಇದು ದ್ವಿಪಕ್ಷೀಯ ಸಂಬಂಧಗಳನ್ನು ದೊಡ್ಡ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಷಿ ತಿಳಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತೈವಾನ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಹೆಚ್ಚು ಎಚ್ಚರ ವಹಿಸುವಂತೆ ಚೀನಾ ಅಧ್ಯಕ್ಷರು ಅಮೆರಿಕವನ್ನು ಒತ್ತಾಯಿಸಿದ್ದಾರೆ.

