HEALTH TIPS

ಎಸ್‌ಐಆರ್ ಸ್ಥಗಿತಕ್ಕೆ ನಾಗರಿಕ ಸಮಾಜದಿಂದ ಒತ್ತಾಯ; ಚುನಾವಣಾ ಆಯೋಗದ ಮೇಲೆ 'ರಾಜಕೀಯ ಹೊಂದಾಣಿಕೆ' ಆರೋಪ

ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ದೇಶದಾದ್ಯಂತದ 250 ಕ್ಕೂ ಹೆಚ್ಚು ನಾಗರಿಕ ಸಮಾಜದ ಸದಸ್ಯರು, ಕಾರ್ಯಕರ್ತರು, ಮಾಜಿ ನ್ಯಾಯಾಧೀಶರು ಹಾಗೂ ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.

ಈ ಸಂಬಂಧ ಬಿಡುಗಡೆಗೊಳಿಸಿರುವ ಜಂಟಿ ಹೇಳಿಕೆಯಲ್ಲಿ, ಎಸ್‌ಐಆರ್ ಪ್ರಕ್ರಿಯೆಯಿಂದ 13 ರಾಜ್ಯಗಳಲ್ಲಿ ಸುಮಾರು 6.5 ಕೋಟಿ ಕಾನೂನುಬದ್ಧ ಮತದಾರರು ಮತದಾನ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಭಾರತೀಯ ಚುನಾವಣಾ ಆಯೋಗ (ECI) ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿರುವ ಅವರು, ಈ ಪ್ರಕ್ರಿಯೆಯನ್ನು "ಅಸಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ, ಪಾರದರ್ಶಕತೆಯಿಲ್ಲದ ಹಾಗೂ ಅವೈಜ್ಞಾನಿಕ" ಎಂದು ಹೇಳಿದ್ದಾರೆ.

ಎದ್ದೇಳು ಕರ್ನಾಟಕದ ಕಾರ್ಯಕರ್ತೆ ತಾರಾ ರಾವ್, ಎಪಿಸಿಆರ್ (Association for Protection of Civil Rights) ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಹಾಗೂ ಜಾರ್ಖಂಡ್ ಜನಾಧಿಕಾರ ಮಹಾಸಭಾದ ಸಂಯೋಜಕ ಮಂಥನ್ ಅವರ ನೇತೃತ್ವದಲ್ಲಿ ಈ ಜಂಟಿ ಹೇಳಿಕೆ ಹೊರಬಂದಿದೆ.

ಈ ಹೇಳಿಕೆಗೆ ಸುಪ್ರೀಂ ಕೋರ್ಟ್‌ ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ, ಅರ್ಥಶಾಸ್ತ್ರಜ್ಞ ಪರಕಲಾ ಪ್ರಭಾಕರ್, ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ (MKSS) ಕಾರ್ಯಕರ್ತ ನಿಖಿಲ್ ಡೇ, ಸ್ವರಾಜ್ ಇಂಡಿಯಾ ಸಂಸ್ಥಾಪಕ ಹಾಗೂ ಭಾರತ್ ಜೋಡೋ ಅಭಿಯಾನದ ಯೋಗೇಂದ್ರ ಯಾದವ್, ದಲಿತ ಹಕ್ಕುಗಳ ಹೋರಾಟಗಾರ ಮತ್ತು ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಸೇರಿದಂತೆ ಅನೇಕ ಗಣ್ಯರು ಸಹಿ ಹಾಕಿದ್ದಾರೆ.

2025ರಲ್ಲಿ ಎಸ್‌ಐಆರ್ ಜಾರಿಗೆ ಬಂದ ನಂತರ ನಡೆದ ಪರಿಷ್ಕರಣೆಗಳಿಂದ ಮತದಾರರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 35 ಲಕ್ಷ ಮತದಾರರ ಹೆಸರುಗಳನ್ನು ಪರಿಶೀಲನೆ ನಡೆಸದೆ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿಕೆ ಆರೋಪಿಸಿದೆ. ಇದರಿಂದ ಅವರು ಮತದಾನ ಹಕ್ಕು ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ. ಈ ಬೆಳವಣಿಗೆಯನ್ನು "ಮೂಲಭೂತ ಹಕ್ಕಿನ ಸಾಮೂಹಿಕ ನಿರಾಕರಣೆ" ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ ಸಮುದಾಯಗಳು, ಆದಿವಾಸಿಗಳು, ದಲಿತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಈ ಪ್ರಕ್ರಿಯೆಯಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ಹೇಳಿಕೆ ಹೇಳಿದೆ. ಇದು ಆಕಸ್ಮಿಕವಲ್ಲ; ದೇಶದ ವೈವಿಧ್ಯಮಯ ಸಾಮಾಜಿಕ ರಚನೆಗೆ ಧಕ್ಕೆಯುಂಟುಮಾಡುವ ಕ್ರಮ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಎಸ್‌ಐಆರ್ ಕುರಿತು ಚುನಾವಣಾ ಆಯೋಗ ನೀಡಿರುವ ಸಮರ್ಥನೆಗಳನ್ನು ಹೇಳಿಕೆಗೆ ಸಹಿ ಹಾಕಿದವರು ತಳ್ಳಿ ಹಾಕಿದ್ದಾರೆ. ಈ ಪ್ರಕ್ರಿಯೆ ತನ್ನ ಉದ್ದೇಶ ಸಾಧಿಸಲು ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತದಾರರ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್ ಸಮರ್ಪಕವಾಗಿ ಮಧ್ಯಪ್ರವೇಶಿಸಿಲ್ಲ ಎಂಬ ಅಭಿಪ್ರಾಯ ಹೇಳಿಕೆಯಲ್ಲಿ ವ್ಯಕ್ತವಾಗಿದೆ.

ಮುಂದಿನ ಚುನಾವಣೆಗೆ ಮೊದಲು ಎಸ್‌ಐಆರ್‌ನ ಸಾಂವಿಧಾನಿಕ ಸಿಂಧುತ್ವ ಕುರಿತು ಬಾಕಿ ಇರುವ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.

ಎಲ್ಲ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಈಗಾಗಲೇ ನಡೆದಿರುವ ಪ್ರಕ್ರಿಯೆಗಳ ಸಂಪೂರ್ಣ ಪರಿಶೀಲನೆ ಮಾಡಿ ತಿದ್ದುಪಡಿ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ನಾಗರಿಕ ಸಮಾಜ ಒಕ್ಕೂಟ ಮುಂದಿಟ್ಟಿದೆ.

ಎಸ್‌ಐಆರ್ ಮುಂದುವರಿಸಬೇಕಾದರೆ, ಮೊದಲು ಕಠಿಣ ಲೆಕ್ಕಪರಿಶೋಧನೆ ಹಾಗೂ ಸ್ಪಷ್ಟ ನಿಯಮಗಳನ್ನು ಜಾರಿಗೆ ತರಬೇಕು. ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆ ಮುಂದುವರಿಸಬಾರದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಆಯೋಗ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪ ಮಾಡಿರುವ ಹೇಳಿಕೆಯು ಅದಕ್ಕಾಗಿ ಆಯೋಗವನ್ನು ಬದಲಿಸಿ, ಸಂಸತ್ತಿನ ಮೇಲ್ವಿಚಾರಣೆಯಲ್ಲಿರುವ ಹೊಸ ವ್ಯವಸ್ಥೆ ತರಬೇಕು ಎಂದು ಒತ್ತಾಯಿಸಿದೆ.

ಚುನಾವಣಾ ಆಯೋಗ ಇದೇ ರೀತಿಯಲ್ಲಿ ಮುಂದುವರಿದರೆ ದೇಶಾದ್ಯಂತ ಹೋರಾಟಗಳು ನಡೆಯಬಹುದು ಎಂದು ಎಚ್ಚರಿಸಲಾಗಿದೆ.

ದೇಶದ ವಿವಿಧ ರಾಜ್ಯಗಳ ನಾಗರಿಕ ಸಮಾಜ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರವಾಗಿ ಈ ಹೇಳಿಕೆ ಪ್ರಕಟಿಸಲಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಕರ್ನಾಟಕ, ಜಾರ್ಖಂಡ್, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಒಡಿಶಾ, ಬಿಹಾರ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries