ಜಬಲ್ಪುರ: ನರ್ಮದಾ ನದಿಗೆ ನಿರ್ಮಿಸಲಾಗಿರುವ ಬಾರ್ಗಿ ಅಣೆಕಟ್ಟೆಯಲ್ಲಿ ಸಂಭವಿಸಿದ ಪ್ರವಾಸಿ ಬೋಟ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಭಾನುವಾರ (ಮೇ.3) ಬೆಳಿಗ್ಗೆ ಐದು ವರ್ಷದ ಬಾಲಕ ಹಾಗೂ ಆತನ ಚಿಕ್ಕಪ್ಪನ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತವು ಮಧ್ಯಪ್ರದೇಶದ ಜಬಲ್ಪುರದಲ್ಲಿ ಏಪ್ರಿಲ್ 30ರಂದು (ಗುರುವಾರ) ಸಂಜೆ ಸಂಭವಿಸಿತ್ತು.
'ಐದು ವರ್ಷದ ಮಯೂರಂ ಮತ್ತು ಖಮರಿಯಾದ ಆರ್ಡ್‌ನನ್ಸ್ ಫ್ಯಾಕ್ಟರಿ ಉದ್ಯೋಗಿ ಕಾಮರಾಜ್ (50) ಅವರ ಮೃತದೇಹಗಳು ಅಣೆಕಟ್ಟಿನ ನೀರಿನಲ್ಲಿ ತೇಲುತ್ತಿದ್ದವು. ಇಬ್ಬರ ದೇಹಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ನಾಪತ್ತೆಯಾಗಿದ್ದ ಒಟ್ಟು 13 ಮಂದಿಯ ಪತ್ತೆ ಕಾರ್ಯ ಪೂರ್ಣಗೊಂಡಂತಾಗಿದೆ' ಎಂದು ಬರ್ಗಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಂಜುಲ್ ಅಯಂಕ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಆಗ್ರಾದಿಂದ ಏರ್‌ಲಿಫ್ಟ್ ಮಾಡಲಾದ ಸೇನೆಯ 20 ಮುಳುಗುತಜ್ಞರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯ ಮುಳುಗುತಜ್ಞರು ಸತತ ಶೋಧ ಕಾರ್ಯ ನಡೆಸಿದ್ದರು. ಬೋಟ್‌ನಲ್ಲಿದ್ದ ಒಟ್ಟು 41 ಪ್ರಯಾಣಿಕರ ಪೈಕಿ 28 ಮಂದಿಯನ್ನು ಘಟನೆ ನಡೆದ ದಿನದಂದೇ ರಕ್ಷಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ 43 ಜನರು ನೌಕೆಯತ್ತ ತೆರಳುತ್ತಿರುವುದು ಕಂಡುಬಂದಿದ್ದು, ಈವರೆಗೆ 41 ಪ್ರಯಾಣಿಕರ ಗುರುತು ಪತ್ತೆಯಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೋಟ್‌ನ ಮೂವರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

