ಚೆನ್ನ್ಯೆ: ತಮಿಳುನಾಡಿನ ನೂತನ ಮುಖ್ಯಮಂತ್ರಿ, ಟಿವಿಕೆ ಪಕ್ಷದ ನಾಯಕ ಬುಧವಾರ ಸದನದಲ್ಲಿ ಬಹುಮತ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದೆಯಾದರೂ, ವಿಜಯ್ ಅವರು ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರಿಂದ ಅದರ ಶಾಸಕ ಸಂಖ್ಯಾ ಬಲ 107 ಆಗಿದೆ.ಕಾಂಗ್ರೆಸ್ನ ಐವರು ಶಾಸಕರು ಹಾಗೂ ಸಿಪಿಐ, ಸಿಪಿಎಂ, ಐಯುಎಂಎಲ್ ಮತ್ತು ವಿಸಿಕೆಯ ತಲಾ ಇಬ್ಬರು ಶಾಸಕರ ಬೆಂಬಲ ಟಿವಿಕೆಗೆ ದೊರೆತಿದೆ. ಇದರೊಂದಿಗೆ ವಿಜಯ್ ಅವರಿಗೆ 120 ಶಾಸಕರ ಬೆಂಬಲ ದೊರೆತಂತಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ.
ಎಡಿಎಂಕೆಯ 30 ಮಂದಿ ಭಿನ್ನಮತೀಯ ಶಾಸಕರು ಬೆಂಬಲ ಘೋಷಿಸಿರುವುದರಿಂದ ವಿಜಯ್ ಅವರು ಸದನದಲ್ಲಿ ನಿರಾಯಾಸವಾಗಿ ಬಹುಮತ ಸಾಬೀತುಪಡಿಸುವಲ್ಲಿ ಸಫಲರಾಗಲಿದ್ದಾರೆ ಎನ್ನಲಾಗಿದೆ.
ವಿಜಯ್ಗೆ ಬೆಂಬಲ ಘೋಷಿಸಿದ ಎಎಂಕೆ ಶಾಸಕ ಪಕ್ಷದಿಂದ ಉಚ್ಚಾಟನೆ
ವಿಜಯ್ ನೇತೃತ್ವದ ಟಿವಿಕೆ ಸರಕಾರಕ್ಕೆ ಬೆಂಬಲ ಘೋಷಿಸಿದ ಅಮ್ಮ ಮಕ್ಕಳ್ ಕಚ್ಚಿ (ಎಎಂಕೆ) ಪಕ್ಷದ ಶಾಸಕ ಎಸ್.ಕಾಮರಾಜ್ ಅವರನ್ನು ಮಂಗಳವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ. ಮನ್ನಾರ್ಗುಡಿ ಕ್ಷೇತ್ರದಿಂದ ಆಯ್ಕೆಯಾದ ಕಾಮರಾಜ್ ಅವರನ್ನು ಎಎಂಕೆ ಪಕ್ಷದ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಉಚ್ಚಾಟಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಕಾಮರಾಜ್ ಅವರು ರಾಜ್ಯದ ಯುವಜನತೆ ವಿಜಯ್ ಅವರ ಮೇಲೆ ಅಪಾರ ವಿಶ್ವಾಸವಿರಿಸಿದ್ದಾರೆ. ಬುಧವಾರ ನಡೆಯುವ ವಿಶ್ವಾಸಮತ ಯಾಚನೆಯ ವೇಳೆ ವಿಜಯ್ ಅವರ್ನು ತಾನು ಬೆಂಬಲಿಸುವುದಾಗಿ ಕಾಮರಾಜ್ ಹೇಳಿದ್ದರು.
ಕಾಮರಾಜ್ ಅವರು ವಿಜಯ್ ಸರಕಾರವನ್ನು ಬೆಂಬಲಿಸುವ ಪತ್ರಕ್ಕೆ ಸಹಿಹಾಕುವ ಪತ್ರಗಳನ್ನು ಟಿವಿಕೆ ಬಿಡುಗಡೆ ಮಾಡಿತ್ತು. ಆದರೆ ಎಎಂಎಂಕೆ ಪಕ್ಷವು ಇದನ್ನು ನಿರಾಕರಿಸಿತ್ತು ಮತ್ತು ಅದೊಂದು ಎಐ ಮೂಲಕ ಸೃಷ್ಟಿಸಲಾದ ವೀಡಿಯೊ ಎಂಬುದಾಗಿ ಆರೋಪಿಸಿತ್ತು.
̤̤̤̤̤̤̤̤̤̤̤̤
ಕೇರಳದಲ್ಲಿ ಬಗೆಹರಿಯದ 'ಸಿಎಂ' ಆಯ್ಕೆ ಕಗ್ಗಂಟು
ತಿರುವನಂತಪುರ,ಮೇ 12:ಕೇರಳದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟು ಮಂಗಳವಾರವೂ ಮುಂದುವರಿದಿದೆ. ಸಿಎಂ ಯಾರಾಗಬೇಕೆಂಬುದನ್ನು ತೀರ್ಮಾನಿಸುವ ಅಧಿಕಾರ ಮೈತ್ರಿಕೂಟದ ಪಾಲುದಾರ ಪಕ್ಷಗಳಿಗೂ ಇದೆಯೇ ಎಂಬ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಭಿನ್ನಮತ ಮೂಡಿರುವುದಾಗಿ ವರದಿಗಳು ತಿಳಿಸಿವೆ. ಈ ಮಧ್ಯೆ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್, ಮಂಗಳವಾರವೂ ಕೇರಳದ ಹಿರಿಯ ನಾಯಕರ ಜೊತೆ ಮಾತುಕತೆಗಳನ್ನು ಮುಂದುವರಿಸಿದ್ದಾರೆ.
ಮಾತುಕತೆಗಾಗಿ ಕಾಂಗ್ರೆಸ್ನ ಹೈಕಮಾಂಡ್ ಕರೆಸಿಕೊಂಡ ಕೇರಳದ ನಾಯಕರಲ್ಲಿ, ಮಾಜಿ ಕೆಪಿಸಿಸಿ ಅಧ್ಯಕ್ಷರುಗಳಾದ ವಿ.ಎಂ. ಸುಧೀನ್, ಮುಲ್ಲಪಳ್ಳಿ ರಾಮಚಂದ್ರನ್, ಕೆ.ಮುರಳೀಧರನ್, ಕೆ.ಸುಧಾಕರನ್ ಹಾಗೂ ಎಂ.ಎಂ.ಹಸನ್ ಅವರು ಕೂಡಾ ಇದ್ದರೆಂದು ತಿಳಿದುಬಂದಿದೆ.
ಪಕ್ಷದ ಹಿರಿಯ ಶಾಸಕ ಟಿ. ರಾಧಾಕೃಷ್ಣನ್ ಹಾಗೂ ಕಾರ್ಯಕಾರಿ ಅಧ್ಯಕ್ಷರಾದ ಪಿ.ಸಿ.ವಿಷ್ಣುನಾಥ್, ಶಾಫಿ ಪರಂಬಿಲ್ ಹಾಗೂ ಎ.ಪಿ. ಪರಂಬಿಲ್ ಅವರನ್ನೂ ಪಕ್ಷದ ನಾಯಕತ್ವವು ಮಾತುಕತೆಗಾಗಿ ದಿಲ್ಲಿಗೆ ಆಹ್ವಾನಿಸಿರುವುದಾಗಿ ತಿಳಿದುಬಂದಿದೆ.
ಹೈಕಮಾಂಡ್ ಜೊತೆ ಮಾತುಕತೆಯ ಬಳಿಕ ಸುಧಾಕರನ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸುವಾಗ ಶಾಸಕರ ಅಭಿಪ್ರಾಯಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

