HEALTH TIPS

ರಾಹುಲ್ ಗಾಂಧಿಯವರ ಪೌರತ್ವ ರದ್ದುಪಡಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ ನಲ್ಲಿ ರಿಟ್ ಅರ್ಜಿ

ಲಕ್ನೊ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ರದ್ದುಪಡಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ನ ಲಕ್ನೊ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ರಾಯ್ಬರೇಲಿ ಲೋಕಸಭಾ ಕ್ಷೇತ್ರದಿಂದ ಅವರು ಸಂಸತ್ ಸದಸ್ಯರಾಗಿ ಮುಂದುವರಿಯುವ ಅರ್ಹತೆಯನ್ನೂ ಪ್ರಶ್ನಿಸಿ, ಅವರ ವಿರುದ್ಧ 'ಕ್ವೋ ವಾರಂಟೊ' ರಿಟ್ ಜಾರಿಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

ವಕೀಲ ಅಶೋಕ್ ಪಾಂಡೆ ಮತ್ತು ದಂತ ಶಸ್ತ್ರಚಿಕಿತ್ಸಕ ರಜನೇಶ್ ಕುಮಾರ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಶೇಖರ್ ಬಿ. ಸರಾಫ್ ಹಾಗೂ ನ್ಯಾಯಮೂರ್ತಿ ಅಬ್ಧೇಶ್ ಕುಮಾರ್ ಚೌಧರಿ ಅವರ ಪೀಠದ ಮುಂದೆ ಮಂಗಳವಾರ ವಿಚಾರಣೆ ನಡೆಯಲಿದೆ.

2003ರ ಆಗಸ್ಟ್ 21ರಂದು ಯುಕೆ ಮೂಲದ 'ಎಂ/ಎಸ್ ಬ್ಯಾಕಾಪ್ಸ್ ಲಿಮಿಟೆಡ್' ಕಂಪೆನಿಯನ್ನು ರಾಹುಲ್ ಗಾಂಧಿಯವರು ಸ್ಥಾಪಿಸಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಯುಕೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ದಾಖಲೆಗಳ ಪ್ರಕಾರ, ಅವರು ಕಂಪೆನಿಯ ನಿರ್ದೇಶಕ ಮತ್ತು ಪ್ರಮುಖ ಷೇರುದಾರರಾಗಿದ್ದರು ಎಂದು ಅರ್ಜಿದಾರರು ತಿಳಿಸಿದ್ದಾರೆ.

ಅದೇ ದಾಖಲೆಗಳಲ್ಲಿ ಲಂಡನ್ ವಿಳಾಸ ಉಲ್ಲೇಖವಾಗಿದ್ದು, ವಿವಿಧ ವೆಬ್ ಸೈಟ್ ಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ರಾಹುಲ್ ಗಾಂಧಿಯವರು ಬ್ರಿಟಿಷ್ ಪ್ರಜೆ ಎಂದು ತೋರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. 2004ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲೂ ಕಂಪೆನಿಯ ಮಾಲೀಕತ್ವವನ್ನು ಅವರು ಉಲ್ಲೇಖಿಸಿದ್ದರು ಎಂದು ಅರ್ಜಿದಾರರು ಹೇಳಿದ್ದಾರೆ.

ಭಾರತೀಯ ಪೌರತ್ವ ಕಾಯ್ದೆಯ ಸೆಕ್ಷನ್ 9 ಅಡಿಯಲ್ಲಿ ವಿದೇಶಿ ಪೌರತ್ವವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದರೆ ಭಾರತೀಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಈ ಕಾರಣದಿಂದ ರಾಹುಲ್ ಗಾಂಧಿಯವರು ಭಾರತೀಯ ಪ್ರಜೆ ಅಲ್ಲ; ಹೀಗಾಗಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಾಗೂ ಸಂಸತ್ ಸದಸ್ಯರಾಗಿರಲು ಅರ್ಹರಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಇದೇ ವಿಷಯವಾಗಿ 2015ರಲ್ಲಿ ವಕೀಲ ಅಶೋಕ್ ಪಾಂಡೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬ್ರಿಟನ್ ನಲ್ಲಿ ಸಲ್ಲಿಸಿದ್ದ ಆದಾಯ ತೆರಿಗೆ ದಾಖಲೆಗಳಲ್ಲಿ ರಾಹುಲ್ ಗಾಂಧಿಯವರು ತಮ್ಮ ರಾಷ್ಟ್ರೀಯತೆಯನ್ನು 'ಬ್ರಿಟಿಷ್' ಎಂದು ಉಲ್ಲೇಖಿಸಿದ್ದರು ಎಂದು ಅವರು ವಾದಿಸಿದ್ದರು.

ಆದರೆ, ಪೌರತ್ವ ಕಾಯ್ದೆಯ ಸೆಕ್ಷನ್ 9(2) ಅಡಿಯಲ್ಲಿ ವಿದೇಶಿ ಪೌರತ್ವದ ಪ್ರಶ್ನೆಯನ್ನು ತೀರ್ಮಾನಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಷ್ಟೇ ಇದೆ ಎಂದು ಹೇಳಿ ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿತ್ತು.

ನಂತರ 2019ರಲ್ಲಿ ರಜನೇಶ್ ಕುಮಾರ್ ಸಿಂಗ್ ಇದೇ ವಿಚಾರವಾಗಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಆ ವೇಳೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದೆಂದು ಹೇಳಿ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.

ಅರ್ಜಿದಾರರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ರಾಹುಲ್ ಗಾಂಧಿಯವರ ಪೌರತ್ವ ರದ್ದುಪಡಿಸುವ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಈಗಿನ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು 2019ರಲ್ಲಿ ನೀಡಿದ್ದ ದೂರಿನ ಆಧಾರದಲ್ಲಿ, ರಾಹುಲ್ ಗಾಂಧಿಯವರ ಪೌರತ್ವ ಕುರಿತು ಸ್ಪಷ್ಟನೆ ನೀಡುವಂತೆ ಗೃಹ ಸಚಿವಾಲಯ ಕೇಳಿತ್ತು ಎಂದು ಅರ್ಜಿದಾರರು ತಿಳಿಸಿದ್ದಾರೆ.

2024ರಲ್ಲಿ ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಅವರು ರಾಯ್ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿಯವರ ಆಯ್ಕೆಯನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನೂ ಉಲ್ಲೇಖಿಸಲಾಗಿದೆ. ಆದರೆ, ಆ ಅರ್ಜಿಯನ್ನು ಬಳಿಕ ಹಿಂಪಡೆಯಲಾಗಿತ್ತು. ಪೌರತ್ವ ಕಾಯ್ದೆ 1955ರ ಸೆಕ್ಷನ್ 9(2) ಅಡಿಯಲ್ಲಿ ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಲು ಅವಕಾಶ ನೀಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries