ಪೆರ್ಲ: ನರಸಿಂಹ ಜಯಂತಿಯ ಪುಣ್ಯ ದಿನದಂದು ಪುತ್ತೂರಿನ ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘವು ಧ್ಯಾನ ಹಾಗೂ ಜ್ಞಾನದ ಮಂದಿರ ನಿರ್ಮಾಣಕ್ಕೆ ಜಾಗವನ್ನು ಸಮಾಜಕ್ಕೆ ಒಪ್ಪಿಸಿದೆ. ಈ ಎರಡೂ ಮಂದಿರಗಳು ಮಕ್ಕಳಲ್ಲಿ ಧರ್ಮ ಹಾಗೂ ರಾಷ್ಟ್ರದ ಬಗ್ಗೆ ಚಿಂತನೆ ಮತ್ತು ಸಮಾಜದ ಬಗ್ಗೆ ಬದ್ಧತೆ ಹಾಗೂ ರಾಷ್ಟ್ರೀಯತೆಯನ್ನು ತುಂಬಲಿ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಹೇಳಿದರು.
ಪೆರ್ಲ ನಾಲಂದ ಕಾಲೇಜು ಸಮೀಪದ ನಿವೇಶನದಲ್ಲಿ ನಿರ್ಮಿಸಲಾಗುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಕಟ್ಟಡದ ಶಿಲಾನ್ಯಾಸವನ್ನು ಗುರುವಾರ ನೆರವೇರಿಸಿ ನಾಲಂದಾ ಕಾಲೇಜು ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪೆರ್ಲ ಕಾಟುಕುಕ್ಕೆ ರಸ್ತೆ ಬಳಿಯ ನಿವೇಶನದಲ್ಲಿ ನೂತನವಾಗಿ ನಿರ್ಮಿಸಲಾಗುವ ಧ್ಯಾನ ಮಂದಿರದ ಶಿಲಾನ್ಯಾಸವನ್ನು ನೆರವೇರಿಸಿದ ನಿವೇಶನದ ಉದಾರ ದಾನಿಗಳಲ್ಲಿ ಓರ್ವರಾದ ಎನ್ ಐಟಿಕೆ ಸುರತ್ಕಲ್ ನಿವೃತ್ತ ಪ್ರಾಚಾರ್ಯ ಡಾ.ಪರ್ತಜೆ ಸುಬ್ಬಣ್ಣ ಭಟ್ ಮಾತನಾಡಿ, ವೇದಾಂತ ಶ್ರವಣ, ಮನನ, ನಿಧಿಧ್ಯಾಸನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಮನಸ್ಸಿನಲ್ಲಿ ಸದ್ವಿಚಾರ, ಚಿಂತನೆಗಳು ಮೂಡಲು ಧ್ಯಾನ ಅಗತ್ಯ. ವೇದಗಳ ಅಂತಿಮ ಭಾಗವಾದ ಉಪನಿಷತ್ತುಗಳಲ್ಲಿ ಧ್ಯಾನ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘವು ಕಾಲೇಜು ಸ್ಥಾಪನೆ ಮೂಲಕ ಕಳೆದ 61 ವರ್ಷಗಳಿಂದ ರಾಷ್ಟ್ರೀಯ ಚಿಂತನೆಗೆ ಅವಕಾಶ ಮಾಡಿಕೊಟ್ಟಿದೆ. ಇಂದು ಧ್ಯಾನ ಹಾಗೂ ಕರ್ಮಯೋಗಕ್ಕೆ ಶಿಲಾನ್ಯಾಸ ನಡೆದಿದೆ ಧ್ಯಾನ ಅಂತರ್ ಶಕ್ತಿಯನ್ನು ಹೆಚ್ಚಿಸಿದರೆ ವಿದ್ಯಾಲಯವು ಅದನ್ನು ಪರಿಣಾಮಕಾರಿಯಾಗಿ ಮಾಡುವುದು. ಸದ್ವಿಚಾರ, ಸತ್ ಚಿಂತನೆಯೊಂದಿಗೆ ಆಧ್ಯಾತ್ಮಿಕ ಮತ್ತು ಜೀವನಕ್ಕೆ ಮೌಲ್ಯವನ್ನು ನೀಡುವ ಕೊತೆಗೆ ಸಮಾಜ ಹಾಗೂ ರಾಷ್ಟ್ರದ ಬಗ್ಗೆ ನಿಷ್ಠೆ ತೋರಿಸಬೇಕು ಎಂದರು.
ಸೆಂಟ್ರಲ್ ಸ್ಕೂಲ್ ಗೌರವ ಸಲಹೆಗಾರ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೇಶನದ ದಾನಿಗಳಾದ ಡಾ.ಪರ್ತಜೆ ಸುಬ್ಬಣ್ಣ ಭಟ್, ಶಾಂತ ಎಸ್.ಉಪಾಧ್ಯ, ಜಯಶ್ರೀ ರಾಜನ್, ರಸ್ತೆ ನಿರ್ಮಾಣಕ್ಕೆ ಉಚಿತವಾಗಿ ಜಾಗ ನೀಡಿದ ಹರೀಶ್ ಶೆಣೈ, ಪೆರ್ಲ ಮತ್ತು ಮನೆಯವರನ್ನು ಸನ್ಮಾನಿಸಲಾಯಿತು.
ಮಣಿಪಾಲ ಅನಂತನಗರ, ಉದ್ಭವ್ ಡಿಸೈನ್ ಸ್ಟುಡಿಯೋ ಎಂಜಿನಿಯರ್ ಸುಮಂತ್ ಮಾತನಾಡಿದರು. ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ವಾಸ್ತುತಜ್ಞ ಸುಬ್ಬಯ್ಯ ವರ್ಮುಡಿ, ನಾಲಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿಎ ಸುಧೀರ್ ಕುಮಾರ್ ರೈ ಯೆಣ್ಮಕಜೆ, ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ, ಪದಾಧಿಕಾರಿಗಳು, ಸದಸ್ಯರು, ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಮಿತಿ ಅಧ್ಯಕ್ಷ ಶ್ರೀಹರಿ ಆರ್. ಭರಣೇಕರ್ ಸ್ವಾಗತಿಸಿದರು. ಸೆಂಟ್ರಲ್ ಸ್ಕೂಲ್ ಆಡಳಿತಾಧಿಕಾರಿ ದಯಾನಂದ ಕೆ.ಆರ್.ವಂದಿಸಿದರು. ನಾಲಂದ ಕಾಲೇಜು ಪ್ರಾಧ್ಯಾಪಕಿಯರಾದ ಪ್ರಮಾಥಿದೇವಧರ್ ಮತ್ತು ಅಶ್ವಿತಾ ಕಾರ್ಯಕ್ರಮ ನಿರ್ವಹಿಸಿದರು.





