ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕಮಲ ಅರಳುವ ಸಮಯ ಬಂದಿದೆ. ಮತ ಎಣಿಕೆಯ ಟ್ರೆಂಡ್ ಪ್ರಕಾರ ಬಿಜೆಪಿ ಅಧಿಕಾರಕ್ಕೇರಲು ಬೇಕಿರುವ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, ಟಿಎಂಸಿ ಹಿನ್ನಡೆ ಅನುಭವಿಸಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಮಮತಾ ಆಸೆಗೆ ಕಣ್ಣೀರು ಎರಚುವ ಸಾಧ್ಯತೆ ದಟ್ಟವಾಗಿದೆ.
ಬಹುತೇಕ ಮತದಾನೋತ್ತರ ಸಮೀಕ್ಷೆಗಳು 150ರಿಂದ 170 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಈಗ ಅದೇ ನಿಜವಾಗುವ ಲಕ್ಷಣ ಕಾಣುತ್ತಿದೆ. ಒಂದು ಕಾಲದಲ್ಲಿ ಮಮತಾ ಆಪ್ತ ಕಾರ್ಯದರ್ಶಿಯಾಗಿದ್ದ ಸುವೇಂದು ಈಗ ಅವರನ್ನು ಮೆಟ್ಟಿ ನಿಲ್ಲುವತ್ತ ದಾಪುಗಾಲಿಟ್ಟಿದ್ದಾರೆ.
2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾರನ್ನು ಸೋಲಿಸುವುದೂ ಅಲ್ಲದೇ, ಬಿಜೆಪಿಗೆ 70ಕ್ಕೂ ಅಧಿಕ ಸ್ಥಾನ ತಂದುಕೊಟ್ಟಿದ್ದ ಸುವೇಂದು ಅಧಿಕಾರಿ, ಈ ಬಾರಿಯೂ ಭವಾನಿಪುರ ಕ್ಷೇತ್ರದಲ್ಲಿ ಮಮತಾಗೆ ಪೈಪೋಟಿ ನೀಡಿದ್ದಾರೆ. 2021ರಲ್ಲೇ ನಡೆದ ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಆಯ್ಕೆಯಾಗಿದ್ದರು.
ಕೋಲ್ಕತ್ತ ಜಿಲ್ಲೆಯೊಳಗೆ ಬರುವ ಭವಾನಿಪುರ ಕ್ಷೇತ್ರವು 2011ರಿಂದ ತೃಣಮೂಲ ಪಕ್ಷದ ಭದ್ರಕೋಟೆಯಾಗಿದೆ. ಆ ಸಮಯದಲ್ಲಿ ಸುಬ್ರತಾ ಬಕ್ಷಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮೊದಲು ನಾಲ್ಕು ಚುನಾವಣೆಗಳಲ್ಲಿ ಇದನ್ನು ಕಾಲಿಘಾಟ್ ಎಂದು ಕರೆಯಲಾಗುತ್ತಿತ್ತು. ಕಾಂಗ್ರೆಸ್ ಮೂರು ಬಾರಿ ಜಯಗಳಿಸಿತ್ತು.
ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಪ್ರತಿ ಹಂತದಲ್ಲೂ ಗುಂಡಿನ ಚಕಮಕಿ ನಡೆದಿತ್ತು. ಮತಯಂತ್ರ ಟ್ಯಾಂಪರಿಂಗ್ ಆರೋಪ ಕೇಳಿಬಂದಿತ್ತು. ಹಾಗಾಗಿ, 2 ಕ್ಷೇತ್ರಗಳಲ್ಲಿ15 ಮತಕೇಂದ್ರದಲ್ಲಿ ಮರು ಮತದಾನ ನಡೆದಿತ್ತು.
2021ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು 294 ಸ್ಥಾನಗಳ ಪೈಕಿ 215 ಸ್ಥಾನಗಳನ್ನು ಗೆದ್ದಿತ್ತು.

