ಭುವನೇಶ್ವರ (PTI): ಒಡಿಶಾದ ಪುರಿಯಲ್ಲಿ ಜೂನ್ 3ರಿಂದ 5ರವರೆಗೆ ನಡೆಯಲಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿಪತ್ತು ಅಪಾಯ ತಗ್ಗಿಸುವ ಕುರಿತ ಎರಡನೇ ತಾಂತ್ರಿಕ ಸಭೆಯಲ್ಲಿ 11 ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
'ವಿಪತ್ತು ಸಂದರ್ಭಗಳನ್ನು ಎದುರಿಸಲು ಕೈಗೊಂಡಿರುವ ಸಿದ್ಧತೆ, ಪರಿಣಾಮಕಾರಿ ಚಂಡಮಾರುತ ನಿರ್ವಹಣೆ, ಮುನ್ಸೂಚನಾ ವ್ಯವಸ್ಥೆಯಲ್ಲಿ ಒಡಿಶಾ ಜಾಗತಿಕವಾಗಿ ಜನಪ್ರಿಯತೆ ಪಡೆದಿರುವುದರಿಂದ ರಾಜ್ಯವು ಸಮಾವೇಶದ ಆತಿಥ್ಯವನ್ನು ವಹಿಸಿದೆ' ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ತಿಳಿಸಿದ್ದಾರೆ.
ಭಾರತ, ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಈಜಿಪ್ಟ್, ಅರಬ್ ಸಂಯುಕ್ತ ಸಂಸ್ಥಾನ (ಯುಎಇ), ಇಥಿಯೋಪಿಯಾ, ಇರಾನ್, ಇಂಡೋನೇಷ್ಯಾ ದೇಶದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಪತ್ತು ಅಪಾಯ ತಗ್ಗಿಸುವ ಕುರಿತ ಮೊದಲ ತಾಂತ್ರಿಕ ಸಭೆಯು ಏಪ್ರಿಲ್ 29 ಮತ್ತು 30ರಂದು ವರ್ಚುವಲ್ ಆಗಿ ನಡೆದಿತ್ತು.

