ನವದೆಹಲಿ: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಜಂತರ್ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಬಲಿಗರು ಪ್ರತಿಭಟನಾ ಸ್ಥಳಕ್ಕೆ ಬರಲು ಪೊಲೀಸರು ಬಿಡುತ್ತಿಲ್ಲ ಎಂದು ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
ರಾಜಸ್ಥಾನ ಪ್ಯಾರಮೆಡಿಕಲ್ ಕೌನ್ಸಿಲ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿದ ಅವರು, 'ಸರ್ಕಾರವು ಪರೀಕ್ಷೆಗಳನ್ನು ನಡೆಸುವಲ್ಲಿ ಮತ್ತೆ ಮತ್ತೆ ವಿಫಲವಾಗುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರಕ್ಕೆ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸಲು ಆಗುತ್ತಿಲ್ಲ' ಎಂದರು.
ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿರುವ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ 66ಕ್ಕೆ ಕುಸಿದಿದ್ದು, ಅವರ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ಸಿಜೆಪಿ ತಿಳಿಸಿದೆ. ಯಾವುದೇ ಅನಾಹುತ ಸಂಭವಿಸಿದರೆ ಅದರ ಹೊಣೆ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರದ್ದು ಎಂದು ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ(ಎಐಎಸ್ಎ) ಆರು ವಿದ್ಯಾರ್ಥಿಗಳು ಪ್ರತ್ಯೇಕ ವೇದಿಕೆಯಲ್ಲಿ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದು, ಈ ಪ್ರತಿಭಟನೆ ಎರಡನೆ ದಿನಕ್ಕೆ ಕಾಲಿಟ್ಟಿದೆ.
ಪರೀಕ್ಷಾ ಅಕ್ರಮಗಳು ವಿಶೇಷವಾಗಿ ನೀಟ್ ಪರೀಕ್ಷೆಗಳ ಅಕ್ರಮಗಳನ್ನು ವಿರೋಧಿಸಿ ಸಿಜೆಪಿ ಜೂನ್ 20ರಂದು ಪ್ರತಿಭಟನೆ ಆರಂಭಿಸಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆದಿದೆ.

