ನವದೆಹಲಿ: ರೈಲಿನಲ್ಲಿ ಟಿಕೆಟ್ ಅಥವಾ ಪಾಸ್ ಇಲ್ಲದೆ ಪ್ರಯಾಣಿಸಿದರೆ ಇನ್ನು ಮುಂದೆ ಕನಿಷ್ಠ ₹500 ದಂಡ ಪಾವತಿಸಬೇಕಾಗುತ್ತದೆ. ಭಾರತೀಯ ರೈಲ್ವೆ, ಟಿಕೆಟ್ ರಹಿತ ಪ್ರಯಾಣಕ್ಕಾಗಿ ಕನಿಷ್ಠ ದಂಡವನ್ನು ₹250ರಿಂದ ₹500ಕ್ಕೆ ಹೆಚ್ಚಿಸಿದೆ. ಜುಲೈ 1ರಿಂದಲೇ ಪರಿಷ್ಕೃತ ದಂಡ ಜಾರಿಗೆ ಬರಲಿದೆ.
ಜನ್ ವಿಶ್ವಾಸ್ ಕಾಯ್ದೆಯಡಿ (ತಿದ್ದುಪಡಿ ನಿಬಂಧನೆಗಳು) ದಂಡದ ಮೊತ್ತವನ್ನು ಪರಿಷ್ಕರಿಸಲಾಗಿದೆ. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವ, ಹಳೆಯ ಟಿಕೆಟ್ ಅನ್ನು ಮರುಬಳಕೆ ಮಾಡುವ ಅಥವಾ ಟಿಕೆಟ್‌ನಲ್ಲಿ ನಮೂದಿಸಿರುವ ಗಮ್ಯಸ್ಥಾನವನ್ನು ಮೀರಿ ಪ್ರಯಾಣಿಸುವವರಿಗೂ ದಂಡದ ಬಿಸಿ ತಟ್ಟಲಿದೆ.
ಟಿಕೆಟ್ ರಹಿತ ಪ್ರಯಾಣಕ್ಕಾಗಿ ಈಗಾಗಲೇ ನಿಗದಿಪಡಿಸಿರುವ ಶಿಕ್ಷೆ, ದಂಡದ ಗರಿಷ್ಠ ಮೊತ್ತದಲ್ಲಿ ಯಾವುದೇ ಬದಲಾವಣೆಯನ್ನು ರೈಲ್ವೆ ಸಚಿವಾಲಯ ಮಾಡಿಲ್ಲ. ಸದ್ಯ ಇದು 6 ತಿಂಗಳವರೆಗೆ ಜೈಲು ಶಿಕ್ಷೆ, ₹1 ಸಾವಿರ ದಂಡ ಅಥವಾ ಎರಡನ್ನೂ ಒಳಗೊಂಡಿದೆ.
ಗಮ್ಯಸ್ಥಾನ ಮೀರಿ ಪ್ರಯಾಣಿಸುವ ವ್ಯಕ್ತಿಗಳು ₹500 ದಂಡ ಪಾವತಿಸಬೇಕಾಗುತ್ತದೆ. ದಂಡ ವಸೂಲಿ ಮತ್ತು ಹೆಚ್ಚುವರಿ ಶುಲ್ಕಗಳಿಗೆ ಸಂಬಂಧಿಸಿದ ನಿಬಂಧನೆಗಳು ಹಿಂದಿನಂತೆಯೇ ಮುಂದುವರಿಯಲಿವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
'ಟಿಕೆಟ್ ಪರಿಶೀಲನೆ ವ್ಯವಸ್ಥೆಯನ್ನು ಬಲಪಡಿಸುವುದರ ಮೂಲಕ, ರೈಲ್ವೆಯ ವರಮಾನ ಸೋರಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ' ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

