ದುಬೈ : ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆಯು (ಐಎಂಒ) ಸೂಚಿಸಿರುವ ಹೊಸ ಮಾರ್ಗವನ್ನು ಬಳಸಿಕೊಂಡು ಹಲವಾರು ತೈಲ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿಯಿಂದ ಗುರುವಾರ ಹೊರಬಂದಿವೆ.
ಇದರ ಬೆನ್ನಲ್ಲೇ, ಒಮಾನ್ ಕರಾವಳಿಯಲ್ಲಿ ಸಾಗುವ ಈ ಮಾರ್ಗವನ್ನು ಬಳಸುವ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಬೆದರಿಕೆ ಹಾಕಿದೆ.
ಈ ಜಲಸಂಧಿಯಲ್ಲಿ ಹಡಗುಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ಆದರೆ, ಯುದ್ಧಪೂರ್ವಕ್ಕಿಂತ ಕಡಿಮೆ ಇದೆ. ಕಳೆದ ವಾರ 125 ಹಡಗುಗಳು ಜಲಸಂಧಿಯನ್ನು ದಾಟಿದ್ದವು. ಬುಧವಾರ 78 ಹಡಗುಗಳು ಸಾಗಿವೆ. ಈ ಪೈಕಿ 10 ಕಚ್ಚಾ ತೈಲ ಟ್ಯಾಂಕರ್‌ಗಳು ಸೇರಿವೆ.
ಈ ಜಲಮಾರ್ಗದ ಮೂಲಕ ಪರ್ಯಾಯ ಮಾರ್ಗವನ್ನು ತೆರೆಯುವುದರಿಂದ ಜಾಗತಿಕ ಆರ್ಥಿಕತೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಗುರುವಾರ ತೈಲ ಬೆಲೆಯು ಬ್ಯಾರೆಲ್‌ಗೆ 73 ಡಾಲರ್ ಇತ್ತು. ಇದು ತೈಲ ಮಾರುಕಟ್ಟೆಯ ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ತೋರಿಸುತ್ತದೆ.
ಅಮೆರಿಕದ ಮಿತ್ರರಾಷ್ಟ್ರಗಳಿಗೆ ಧೈರ್ಯ ತುಂಬಲು ಕೊಲ್ಲಿಗೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, 'ಈ ಹೊಸ ಮಾರ್ಗಕ್ಕೆ ಅಮೆರಿಕ ಬದ್ಧವಾಗಿದೆ' ಎಂದು ಹೇಳಿದ್ದಾರೆ.

