ಮುಕ್ಕಂ: ನದಿಗಳು ಮತ್ತು ಪ್ರವಾಸಿ ತಾಣಗಳಲ್ಲಿ ಮಕ್ಕಳು ಮುಳುಗಿ ಸಾಯುವ ದುರಂತ ಘಟನೆಗಳು ಪುನರಾವರ್ತಿತ ಕಥೆಯಾಗದಂತೆ ತಡೆಯಲು ತೊಟ್ಟುಮುಕ್ಕಂ ಸರ್ಕಾರಿ ಯುಪಿ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ರಾಣಾ ಫಾತಿಮಾ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈಜು ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿದ್ದಾಳೆ.
ರಾಣಾ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಬೇಡಿಕೆಯನ್ನು ತಿಳಿಸಿದರು.
ತಿರುವಂಬಾಡಿ ಕ್ಷೇತ್ರದ ಶಾಸಕ ಸಿ.ಕೆ. ಕಾಸಿಮ್ ಭೇಟಿಯ ನೇತೃತ್ವ ವಹಿಸಿದ್ದರು.
ಮೂರು ವರ್ಷದಿಂದಲೂ ತೊಟ್ಟುಮುಕ್ಕಂ ಚೆರುಪುಳ ನದಿಯನ್ನು ಸಲೀಸಾಗಿ ಈಜುತ್ತಿದ್ದ ರಾಣಾ ಅವರ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಈ ಪುಟ್ಟ ಪ್ರತಿಭೆಯ ಈಜು ಸಾಮಥ್ರ್ಯ ನೋಡಿದ ರಾಹುಲ್ ಗಾಂಧಿ, ಆಕೆಯನ್ನು ಖುದ್ದಾಗಿ ಹೊಗಳಿದ್ದರು. ರಾಣಾ ಮುಕ್ಕಂ ನಗರಸಭೆಯ 'ಈಜಿ ಬನ್ನಿ ಮಕ್ಕಳೇ' ಯೋಜನೆಯ ಬ್ರಾಂಡ್ ರಾಯಭಾರಿಯೂ ಆಗಿದ್ದಾಳೆ. ರಫೀಕ್ ತೊಟ್ಟುಮುಕ್ಕಂ ಮತ್ತು ರಿಫಾನಾ ರಫೀಕ್ ಅವರ ಹಿರಿಯ ಪುತ್ರಿ ರಾಣಾ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾಳೆ.

