ಬದಿಯಡ್ಕ: ಕನ್ನಡ ಪ್ರಜ್ಞೆ ಮತ್ತು ಪರಿಸರ ಪ್ರೀತಿಯ ಪ್ರತೀಕವಾಗಿ ಕಾಸರಗೋಡಿನ ಡಾ. ರತ್ನಾಕರ ಮಲ್ಲಮೂಲೆಯವರ ಬನವಾಸಿ ಮನೆ ಮತ್ತು ಪರಿಸರವು ಕಂಗೊಳಿಸುತ್ತಿರುವುದು ಕನ್ನಡಿಗರು ಅಭಿಮಾನಪಡಬೇಕಾದ ವಿಷಯ ಎಂದು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ಅವರು ಬನವಾಸಿ ಭೇಟಿಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಒಳನಾಡಿಗಿಂತಲೂ ಗಡಿನಾಡು ಕಾಸರಗೋಡಿನಲ್ಲಿ ಕನ್ನಡತನದ ಉಸಿರು ಇನ್ನೂ ಹಸುರಾಗಿದೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮತ್ತು ಜನರ ಮೈಮನಗಳಲ್ಲಿ ಕನ್ನಡ ಪ್ರೀತಿ ಇಂದಿಗೂ ಜೀವಂತವಾಗಿದೆ. ಅದು ಇಲ್ಲಿನ ಕನ್ನಡಿಗರ ಬದುಕಿನ ಪ್ರತಿಯೊಂದು ಹೆಜ್ಜೆಗಳಲ್ಲೂ ಕಾಣಲು ಸಾಧ್ಯ. ಅದಕ್ಕೊಂದು ಉತ್ತಮ ಉದಾಹರಣೆ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆಯವರ ಬನವಾಸಿಯೆಂಬ ನಾಮಧೇಯದ ಮನೆ ಮತ್ತು ಪರಿಸರ. ಮನೆಯ ಪ್ರತಿಯೊಂದು ಕೋಣೆಗೂ ಕನ್ನಡದ ಹೆಸರುಗಳನ್ನಿರಿಸಿದ್ದು ಮಾತ್ರವಲ್ಲ ಮಳೆ ಕೊಯ್ಲು ಕೊಳ ಹಾಗೂ ಕೈತೋಟಕ್ಕೂ ಅವರು ಕನ್ನಡದ ಹೆಸರುಗಳನ್ನಿರಿಸಿ ಇಲ್ಲಿ ಇನ್ನೂ ಕನ್ನಡ ಜೀವಂತವಿದೆಯೆಂದು ಸಾಬೀತುಪಡಿಸಿದ್ದಾರೆ. ಮನೆಗೆ ಬರುವ ರಸ್ತೆಗೆ ಆದಿಕವಿ ಪಂಪನ ಹೆಸರನ್ನಿಡುವ ಮೂಲಕ ಸಾಹಿತ್ಯ, ಪರಿಸರ ಮತ್ತು ಬದುಕು ಬೇರೆಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಂತಹ ಕನ್ನಡ ಪ್ರೀತಿಯನ್ನು ಹಸುರಿನ ಮಧ್ಯೆ ಕಾಣುವಾಗ ಮನಸ್ಸು ಪ್ರಪುಲ್ಲವಾಗುತ್ತದೆ. ಈ ಕಾರಣದಿಂದಲೇ ಬನವಾಸಿ ನೋಡಲು ಜನ ಬರುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡಲು ಕನ್ನಡಿಗರಿಗೆ ಪ್ರತ್ಯೇಕ ಕರೆಬೇಕಾಗಿಲ್ಲ ಎಂದು ಸಿದ್ದರಾಮಯ್ಯ ನುಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿ. ಪ್ರೊ. ಎಲ್ ಎನ್ ಮುಕುಂದರಾಜ್, ಅವರ ಸಹಧರ್ಮಿಣಿ, ಡಾ. ಪದ್ಮ ಟಿ ಬೆಂಗಳೂರು, ಮುಕುಂದರಾಜ್ ಅವರ ಸೊಸೆ ಶ್ರುತಿ, ಮಕ್ಕಳಾದ ಆದ್ಯತ್, ಅಗಮ್ಯ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ಗಮಕ ಕಲಾ ಪರಿಷತ್ ಕಾಸರಗೋಡು ಸಂಸ್ಥೆಯ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ ಶ್ರೀನಾಥ್, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಸದಸ್ಯ ಈಶ್ವರ ಮಾಸ್ತರ್, ಗಾಯಕ ವಸಂತ ಬಾರಡ್ಕ, ಮಹಮ್ಮದ್ ಹಾಶಿಂ ಮುಂತಾದವರು ಜೊತೆಗಿದ್ದರು. ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಸುನಿತಾ ಯಾದವ್ ವಂದಿಸಿದರು. ವಸಂತ ಬಾರಡ್ಕ ಪ್ರಾರ್ಥನೆ ಹಾಡಿದರು.

.jpeg)

