ಇಸ್ಲಾಮಾಬಾದ್: ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವುದಕ್ಕಾಗಿ 10 ಶತಕೋಟಿ ಡಾಲರ್ ನೆರವು ನೀಡುವಂತೆ ಪಾಕಿಸ್ತಾನದ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ಅವರು ಅಮೆರಿಕಕ್ಕೆ ಮನವಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಅವರಿಗೆ ಈ ಕುರಿತು ಔರಂಗಜೇಬ್ ಮಾಡಿದ್ದಾಗಿ 'ಡಾನ್' ದೈನಿಕ ವರದಿ ಮಾಡಿದೆ.
ಕರೆನ್ಸಿ ವಿನಿಮಯ, ಸಾಲ ಸೌಲಭ್ಯ ಸೇರಿದಂತೆ ಇನ್ನಿತರೆ ರೂಪದಲ್ಲಿ ಒಟ್ಟು 10 ಶತಕೋಟಿ ಡಾಲರ್ ನೆರವನ್ನು ಪಾಕಿಸ್ತಾನ ಕೋರಿದೆ. ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಈ ವಿಚಾರವನ್ನು ದೃಢಪಡಿಸಿದೆ. ಆದರೆ, ಈ ಬಗ್ಗೆ ಅಮೆರಿಕ ಹಣಕಾಸು ಸಚಿವಾಲಯದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದೂ 'ಡಾನ್' ವರದಿ ಮಾಡಿದೆ.
ಪಾಕಿಸ್ತಾನದ ಮನವಿಯನ್ನು ಅಮೆರಿಕ ಅನುಮೋದಿಸುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ ಎನ್ನಲಾಗಿದೆ.

