ಒಂಟಾರಿಯೊ : ಕೆನಡಾದ ಒಂಟಾರಿಯೊದಲ್ಲಿ ಬೃಹತ್ ಮಾದಕ ವಸ್ತು ಕಳ್ಳಸಾಗಣೆ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ಭಾರತೀಯ ಮೂಲದ ಬಹುತೇಕರು ಸೇರಿದಂತೆ 19 ಜನರನ್ನು ಬಂಧಿಸಲಾಗಿದೆ. ₹930 ಕೋಟಿ ಮೌಲ್ಯದ 1.7 ಟನ್ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮಾದಕ ವಸ್ತು ಕಳ್ಳಸಾಗಣೆ ಜಾಲವು ವಾಣಿಜ್ಯ ಮಾರ್ಗಗಳ ಮೂಲಕ ಕೆನಡಾಕ್ಕೆ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯ ಆಧಾರದಲ್ಲಿ ಗಡಿಯಾಚೆಗೆ ತನಿಖೆ ನಡೆಸಲಾಯಿತು ಎಂದು ಒಂಟಾರಿಯೊ ಪ್ರಾಂತೀಯ ಪೊಲೀಸರು ತಿಳಿಸಿದ್ದಾರೆ.
ಜೂನ್ 25ರಿಂದ ಜುಲೈ 20ರವರರೆಗೆ ವಿಂಡ್ಸರ್, ಕೊರುನ್ನಾ ಸೇರಿದಂತೆ ಹಲವು ಸ್ಥಳಗಳಲ್ಲಿರುವ ಮನೆ ಮತ್ತು ಉದ್ಯಮ ಕಚೇರಿಗಳಲ್ಲಿ ಪೊಲಿಸರು 22 ಬಾರಿ ಶೋಧ ನಡೆಸಿದ್ದಾರೆ.
973 ಕೆ.ಜಿ ಕೊಕೇನ್, 660 ಕೆ.ಜಿ ಮೆಥಂಫೆಟಮೈನ್, 49 ಕೆ.ಜಿ ಓಪಿಯಂ, 230 ಆಕ್ಸಿಕೊಡೊನ್ ಗುಳಿಗೆಗಳು, 17 ಶಸ್ತ್ರಾಸ್ತ್ರಗಳು, 80 ಸಾವಿರ ಕೆನಡಾ ಡಾಲರ್ ಮತ್ತು 10 ಸಾವಿರ ಅಮೆರಿಕ ಡಾಲರ್ ನಗದು, ಆಭರಣಗಳು, ಹಣ ಎಣಿಕೆ ಮಾಡುವ ಯಂತ್ರಗಳು, 43 ಮೊಬೈಲ್ ಫೋನ್ಗಳು, ಆರು ಲ್ಯಾಪ್ಟಾಪ್ಗಳು ಮತ್ತು ವಾಹನವೊಂದನ್ನು ಜಪ್ತಿ ಮಾಡಲಾಗಿದೆ.
ಬಂಧಿತರಲ್ಲಿನ ಬಹುತೇಕರು ಟ್ರಕ್ ಚಾಲಕರಾಗಿದ್ದು, ಕೆನಡಾ-ಅಮೆರಿಕ ಗಡಿಯುದ್ದಕ್ಕೂ ಸರಕುಗಳ ಅಕ್ರಮ ಸಾಗಾಣೆಗಾಗಿ ಅವರನ್ನು ನೇಮಿಸಿಕೊಳ್ಳಲಾಗಿತ್ತು.

