ಎಫ್ಸಿಆರ್ಎ ಕಾಯ್ದೆ 2026 ಎಂದರೇನು?
ಕೇಂದ್ರ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆ 2026 ಎನ್ನುವ ಒಂದು ನೂತನ ಕಾನೂನನ್ನು ಜಾರಿಗೆ ತಂದಿದೆ. ಸರಳ ಶಬ್ದಗಳಲ್ಲಿ ವಿವರಿಸುವುದಾದರೆ, ಭಾರತೀಯ ಸಂಸ್ಥೆಗಳು ಹೇಗೆ ವಿದೇಶೀ ಹಣವನ್ನು ಸ್ವೀಕರಿಸಬಹುದು ಎನ್ನುವುದನ್ನು ಇದು ನಿಯಂತ್ರಿಸುತ್ತದೆ.
ಈ ಮಸೂದೆಯನ್ನು ಮಾರ್ಚ್ 25, 2026ರಂದು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಆದರೆ, ವಿರೋಧ ಪಕ್ಷಗಳು ಇದಕ್ಕೆ ಭಾರೀ ಪ್ರತಿರೋಧ ವ್ಯಕ್ತಪಡಿಸಿದ ಕಾರಣದಿಂದ ಮಸೂದೆ ಅನುಮೋದನೆ ಪಡೆಯಲಿಲ್ಲ. ಇದೇ ಮಸೂದೆ ಈ ಬಾರಿ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆಗಳಿವೆ.
ಕೆಲವು ಸಂಘಟನೆಗಳೇಕೆ ಆತಂಕಕ್ಕೆ ಒಳಗಾಗಿವೆ?
ಬಹಳಷ್ಟುಅಲ್ಪಸಂಖ್ಯಾತ ಸಂಸ್ಥೆಗಳು, ಅದರಲ್ಲೂ ಕ್ರೈಸ್ತ ಸಂಸ್ಥೆಗಳು ಇದರಿಂದ ಆತಂಕಕ್ಕೆ ಒಳಗಾಗಿವೆ. ಅವರ ಭಯ ಸರಳ. ಒಂದು ವೇಳೆ ವಿದೇಶೀ ಅನುದಾನ ಪಡೆಯುವ ಅವುಗಳ ಪರವಾನಗಿಯಾದ ಎಫ್ಸಿಆರ್ಎ ನೋಂದಣಿ ರದ್ದಾದರೆ, ಅಥವಾ ಅಮಾನತುಗೊಂಡರೆ, ಅಥವಾ ನವೀಕರಣ ಆಗದಿದ್ದರೆ, ಆಗ ವಿದೇಶೀ ಹಣದಿಂದ ಖರೀದಿಸಿದ ಕಟ್ಟಡಗಳು, ಭೂಮಿ, ವಾಹನಗಳು, ಅಥವಾ ಇತರೆ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದೇ ಎನ್ನುವುದು ಅವುಗಳ ಆತಂಕವಾಗಿದೆ.
ಸರ್ಕಾರ ಹೇಳುವುದೇನು?
ಜುಲೈ 22, 2026ರಂದು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಈ ಕುರಿತಂತೆ ಸ್ಪಷ್ಟೀಕರಣ ನೀಡಿತು. ಇಂತಹ ಪ್ರಕರಣಗಳನ್ನು ಗೊತ್ತುಪಡಿಸಿದ ಪ್ರಾಧಿಕಾರದ ರೀತಿಯಲ್ಲಿ ಕಾರ್ಯಾಚರಿಸುವ ಓರ್ವ ವಿಶೇಷ ಅಧಿಕಾರಿ ನಿರ್ವಹಿಸಲಿದ್ದಾರೆ ಎಂದು ಪಿಐಬಿ ವಿವರಿಸಿತು. ಆದರೆ, ಈ ಅಧಿಕಾರಿ ಧಾರ್ಮಿಕ ಆರಾಧನಾ ಸ್ಥಳದ ಧಾರ್ಮಿಕ ಭಾವನೆಯನ್ನು ಗೌರವಿಸಲಿದ್ದಾರೆ ಎಂದೂ ಮಾಹಿತಿ ನೀಡಿತು. ಅಂದರೆ, ಚರ್ಚ್ ಚರ್ಚ್ ಆಗಿಯೇ ಉಳಿಯಲಿದೆ, ಮಂದಿರ ಮಂದಿರ ಆಗಿಯೇ ಉಳಿಯಲಿದೆ ಎಂದಿತು. ಇದರೊಡನೆ, ಪಿಐಬಿ ಸುಳ್ಳು ವರ್ಸಸ್ ಸತ್ಯ ಎನ್ನುವ ವಿಭಾಗದಡಿ ಹಿನ್ನೆಲೆ ಮಾಹಿತಿಗಳನ್ನೂ ಒದಗಿಸಿತ್ತು.
ವಿಶೇಷ ಪ್ರಾಧಿಕಾರ ವಾಸ್ತವವಾಗಿ ಏನು ಮಾಡಲಿದೆ?
ಈ ಗೊತ್ತುಪಡಿಸಿದ ಪ್ರಾಧಿಕಾರ ವಿದೇಶೀ ದೇಣಿಗೆಗಳಿಂದ ಖರೀದಿಸಿದ ಆಸ್ತಿಗಳ ಮೇಲೆ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಬಹುದು. ಪ್ರಾಧಿಕಾರ ಆ ಆಸ್ತಿಗಳನ್ನು ನಿರ್ವಹಿಸಬಹುದು, ಅಥವಾ ಸರ್ಕಾರ ಅಥವಾ ಬೇರಾವುದೋ ಅಧಿಕೃತ ಸಂಸ್ಥೆಗೆ ಅದನ್ನು ಮಾರಾಟ ಮಾಡಬಹುದು. ಇದು ಸಿವಿಲ್ ನ್ಯಾಯಾಲಯವನ್ನು ಹೋಲುವಂತಹ ಅಧಿಕಾರವನ್ನು ಹೊಂದಿರಲಿದೆ.
ಮೂರು ಅಂಶಗಳು ಇಲ್ಲಿ ಬಹಳ ಮುಖ್ಯವಾಗಿವೆ. ಮೊದಲನೆಯದಾಗಿ, ನೋಂದಣಿ ಕಾನೂನಾತ್ಮಕವಾಗಿ ರದ್ದಾದರೆ, ಅಮಾನತುಗೊಂಡರೆ, ಅಥವಾ ಅವಧಿ ಮುಕ್ತಾಯಗೊಂಡರೆ ಮಾತ್ರವೇ ಇಂತಹ ಕ್ರಮಗಳನ್ನು ಕೈಗೊಳ್ಳಬಹುದು. ಎರಡನೆಯದಾಗಿ, ಭಾರತದ ಹಣವನ್ನು ಬಳಸಿ ಖರೀದಿಸಿದ ಆಸ್ತಿಯನ್ನು ಮುಟ್ಟಲು ಸಾಧ್ಯವಿಲ್ಲ. ಇನ್ನು ಮೂರನೆಯದಾಗಿ, ಅಂತಹ ಆಸ್ತಿಗಳನ್ನು ಕೈಗೆ ತೆಗೆದುಕೊಳ್ಳುವುದು ಒಂದು ತಾತ್ಕಾಲಿಕ ಕ್ರಮ ಆಗಿರಲಿದೆ. ಒಂದು ವೇಳೆ ಸಂಸ್ಥೆ ತನ್ನ ಎಫ್ಸಿಆರ್ಎ ನೋಂದಣಿಯನ್ನು ನವೀಕರಿಸಿದರೆ, ಪ್ರತಿಯೊಂದು ಆಸ್ತಿಯನ್ನೂ ಅದಕ್ಕೆ ಮರಳಿಸಬೇಕಾಗುತ್ತದೆ.
ಈ ನಿರ್ಣಯಗಳನ್ನು ಪ್ರಶ್ನಿಸಲು ಸಾಧ್ಯವೇ?
ಹೌದು. ಈ ಪ್ರಾಧಿಕಾರದ ಯಾವುದೇ ಆದೇಶವನ್ನು ಬೇಕಾದರೂ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ, 2026ರ ತಿದ್ದುಪಡಿಯ ಪ್ರಕಾರ, ಇವೆಲ್ಲ ಆಸ್ತಿಗಳನ್ನು ಸರ್ಕಾರವೇ ನೇರವಾಗಿ ನುಂಗಬಹುದು ಎನ್ನುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಪಿಐಬಿ ವಿವರಿಸಿದೆ.
ಎಫ್ಸಿಆರ್ಎ ರದ್ದತಿ ಎಂದರೆ ಶಿಕ್ಷೆಯಲ್ಲ
ಒಂದು ವೇಳೆ ಒಂದು ಎಫ್ಸಿಆರ್ಎ ನೋಂದಣಿ ರದ್ದಾಗಿದೆ ಎಂದರೆ, ಆ ಸಂಸ್ಥೆ ಏನೋ ತಪ್ಪಿ ಕೆಲಸ ಮಾಡಿದೆ ಎಂದರ್ಥವಲ್ಲ. ಬಹಳಷ್ಟು ನೋಂದಣಿಗಳು ಕೇವಲ ಕಾಗದ ಪತ್ರಗಳ ಕಾರಣದಿಂದ, ಅಂದರೆ, ವಾರ್ಷಿಕ ರಿಟರ್ನ್ಸ್ ಸಮಯಕ್ಕೆ ಸರಿಯಾಗಿ ದಾಖಲಿಸದಿರುವುದರಿಂದ, ಎಫ್ಸಿಆರ್ಎ ಅವಧಿ ಮುಕ್ತಾಯಕ್ಕೆ ಮುನ್ನ ವಿಸ್ತರಣೆಗೆ ಅರ್ಜಿ ಸಲ್ಲಿಸದಿರುವುದರಿಂದ, ಅಥವಾ ಬ್ಯಾಂಕ್ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ನೋಂದಣಿ ರದ್ದಾಗುವ ಸಾಧ್ಯತೆಗಳಿವೆ. ಇಂತಹ ರದ್ದತಿಗಳನ್ನು ಸರಿಯಾಗಿ ಪರಿಶೀಲಿಸಿ, ಒಂದು ವೇಳೆ ತಪ್ಪಾಗಿ ರದ್ದಾಗಿದ್ದರೆ ಅದನ್ನು ಸರಿಪಡಿಸುವ ಸಂಪೂರ್ಣ ಅಧಿಕಾರ ಇಂದಿಗೂ ನ್ಯಾಯಾಲಯದ ಬಳಿ ಇದೆ.
ನೈಜ ಚಿತ್ರಣ ತೋರುವ ಅಂಕಿ ಸಂಖ್ಯೆಗಳು
2024-25ರಲ್ಲಿ, ಬಹುತೇಕ 16,200 ಸಂಸ್ಥೆಗಳ ಬಳಿ ನ್ಯಾಯಯುತ ಎಫ್ಸಿಆರ್ಎ ನೋಂದಣಿ ಲಭ್ಯವಿತ್ತು. ಅವು ಒಟ್ಟಾಗಿ ವಿದೇಶಗಳಿಂದ 22,963 ಕೋಟಿ ರೂಪಾಯಿ ಸ್ವೀಕರಿಸಿವೆ. ನಿಯಮಗಳನ್ನು ಅನುಸರಿಸುವ ಸಂಸ್ಥೆಗಳಿಗೆ ವಿದೇಶೀ ದೇಣಿಗೆ ಸ್ವೀಕರಿಸುವುದು ರದ್ದಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಸರ್ಕಾರ ಹೇಳಿದೆ.
ಈ ಕಾನೂನು ಕೇವಲ ಎನ್ಜಿಒಗಳು ಅಥವಾ ಕ್ರೈಸ್ತ ಸಂಘಟನೆಗಳನ್ನು ಗುರಿಯಾಗಿಸಿದೆಯೇ?
ಇಲ್ಲ. ಬಹಳಷ್ಟು ದೇಶಗಳಲ್ಲಿ ಇಂತಹ ಕಾನೂನುಗಳಿದ್ದು, ಅವು ವಶೀಲಿದಾರರು, ಸಾರ್ವಜನಿಕ ಸಂಪರ್ಕ ಸಂಸ್ಥೆಗಳು, ಥಿಂಕ್ ಟ್ಯಾಂಕ್ಗಳು, ವಿಶ್ವವಿದ್ಯಾಲಯಗಳು, ಮತ್ತು ಕಂಪನಿಗಳನ್ನು ಒಳಗೊಂಡಿವೆ. ಯಾವುದಾದರೂ ವಿದೇಶೀ ಸಂಸ್ಥೆಗೆ ಕಾರ್ಯಾಚರಿಸುವ ಯಾವುದೇ ವ್ಯಕ್ತಿ ಅದು ಯಾವುದೇ ವಲಯದ ಕೆಲಸವಾಗಿದ್ದರೂ ಇಂತಹ ನಿಯಮಗಳಡಿ ಬರುತ್ತಾರೆ.
ಬಿಶಪ್ಗಳಿಗೆ ಗೃಹ ಸಚಿವರು ಹೇಳಿದ್ದೇನು?
ಜುಲೈ 10ರಂದು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಕ್ಯಾಥೋಲಿಕ್ ಬಿಶಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸಮಿತಿಯನ್ನು ಭೇಟಿಯಾಗಿ, ಈ ಮಸೂದೆ ಕ್ರೈಸ್ತ ಎನ್ಜಿಒಗಳನ್ನು ಕೇಂದ್ರೀಕರಿಸಿಲ್ಲ ಎಂದು ಭರವಸೆ ನೀಡಿದರು. ಭಾರತವನ್ನು ತಲುಪುವ ಒಟ್ಟು ವಿದೇಶೀ ದೇಣಿಗೆಯ ಪೈಕಿ ಕ್ರೈಸ್ತ ಸಂಘಟನೆಗಳು ಕೇವಲ 15%ಕ್ಕಿಂತಲೂ ಸ್ವಲ್ಪ ಕಡಿಮೆ ಪಾಲು ಹೊಂದಿವೆ ಎಂದು ಗೃಹ ಸಚಿವರು ವಿವರಿಸಿದರು. ಸ್ವತಃ ಸಿಬಿಸಿಐ ಈ ಮಸೂದೆ ಮತ್ತು ಎಫ್ಸಿಆರ್ಎ ತಿದ್ದುಪಡಿ ನಿಯಮಗಳು, 2026ರ ಕುರಿತು ತನ್ನ ಕಳವಳಗಳನ್ನು ವ್ಯಕ್ತಪಡಿಸಲು ಈ ಸಭೆ ನಡೆಸಲು ಕೋರಿತ್ತು.
ಜೂನ್ 22ರ ಹೊಸ ನಿಯಮಗಳು
ಜೂನ್ 22ರಂದು ಪರಿಚಯಿಸಲಾದ ಈ ನಿಯಮಗಳು ಪ್ರತಿಯೊಂದು ಎನ್ಜಿಒಗಳನ್ನೂ ಅದು ಕೈಗೊಳ್ಳುವ ಚಟುವಟಿಕೆಗಳನ್ನು ಐದು ಅನುಮೋದಿತ ವಿಭಾಗಗಳಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ, ಮತ್ತು ಧಾರ್ಮಿಕ ವಿಭಾಗಗಳ ಅಡಿಯಲ್ಲಿ ನಡೆಸುತ್ತದೆ ಎನ್ನುವುದನ್ನು ತಿಳಿಸಬೇಕೆಂದು ಸೂಚಿಸಿವೆ.
ಈ ಕಾನೂನು ಕೇವಲ ಸರಿಯಾದ ಹೊಣೆಗಾರಿಕೆ ಮತ್ತು ಶಿಸ್ತು ತರುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಹೇಳಿದ್ದು, ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ ಎಂದಿದೆ. ಈ ಕುರಿತು ಆತಂಕ ಹೊಂದಿರುವವರು ಯೋಜಿತ ಪ್ರಾಧಿಕಾರಕ್ಕೆ ನೀಡುವ ಅಧಿಕಾರ ವ್ಯಾಪ್ತಿ ಅತ್ಯಂತ ವಿಶಾಲವಾಗಿದೆ ಎಂದು ಭಾವಿಸಿದ್ದಾರೆ. ಇದರ ಕುರಿತ ಅಂತಿಮ ನಿರ್ಧಾರವನ್ನು ಈಗ ಸಂಸತ್ತು ತೆಗೆದುಕೊಳ್ಳಲಿದೆ.

