HEALTH TIPS

ಕೆಂಪು ಸಮುದ್ರ-ಹಾರ್ಮುಝ್ ನಲ್ಲಿ ಬಿಕ್ಕಟ್ಟು | ಬಂದರುಗಳಲ್ಲಿ ಸಿಲುಕಿಕೊಂಡ 0.5 ಮಿಲಿಯನ್ ಟನ್ ಅಕ್ಕಿ: ಭಾರತದ ಬಾಸ್ಮತಿ ರಫ್ತಿಗೆ ತೀವ್ರ ಹೊಡೆತ

ಚಂಡೀಗಢ: ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯನ್ನು ಸಂಪರ್ಕಿಸುವ ಬಾಬ್ ಅಲ್-ಮಂದಾಬ್ ಹಾಗೂ ಹಾರ್ಮುಝ್ ಜಲಸಂಧಿಯ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಮುಂದುವರಿದಿರುವ ಅಡಚಣೆಗಳಿಂದ ಭಾರತದ ಬಾಸ್ಮತಿ ಅಕ್ಕಿ ರಫ್ತು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳಿಗೆ ಅಕ್ಕಿ ಸಾಗಣೆಯ ಮೇಲೆ ಪರಿಣಾಮ ಬೀರಿದ್ದು, ಜಾಗತಿಕ ವ್ಯಾಪಾರದ ಬಗ್ಗೆಯೂ ಕಳವಳ ಹೆಚ್ಚಿಸಿದೆ ಎಂದು newindianexpress.com ವರದಿ ಮಾಡಿದೆ.


ಈ ಅಡಚಣೆಗಳಿಂದ ಸರಕು ಸಾಗಣೆ ಮತ್ತು ಸಮುದ್ರ ವಿಮಾ ವೆಚ್ಚಗಳು ತೀವ್ರವಾಗಿ ಏರಿಕೆಯಾಗಿದ್ದು, ರಫ್ತುದಾರರು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ.

ಮೂಲತಃ ಇರಾನ್‌ ಗೆ ಸಾಗಿಸಬೇಕಿದ್ದ ಸುಮಾರು 0.3 ಮಿಲಿಯನ್ ಮೆಟ್ರಿಕ್ ಟನ್ ಬಾಸ್ಮತಿ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ರವಾನಿಸಬೇಕಿದ್ದ ಸುಮಾರು 0.5 ಮಿಲಿಯನ್ ಮೆಟ್ರಿಕ್ ಟನ್ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿ ಗುಜರಾತ್‌ ನ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳಲ್ಲಿನ ಕಂಟೇನರ್ ಸರಕು ಸಾಗಣೆ ಕೇಂದ್ರಗಳಲ್ಲಿ (ಅಈS) ಸಿಲುಕಿಕೊಂಡಿದೆ.

ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತವು ಸುಮಾರು ಶೇ.45ರಷ್ಟು ಪಾಲು ಹೊಂದಿದ್ದು, ಪಾಕಿಸ್ತಾನ ಮತ್ತು ಥೈಲ್ಯಾಂಡ್‌ ನಂತಹ ಪ್ರಮುಖ ರಫ್ತುದಾರ ರಾಷ್ಟ್ರಗಳೊಂದಿಗೆ ಸ್ಪರ್ಧಿಸುತ್ತಾ 140ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿ ರಫ್ತು ಮಾಡುತ್ತಿದೆ. ಆದರೂ, ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯನ್ನು ಒಳಗೊಂಡ ಭಾರತದ ಒಟ್ಟು ಅಕ್ಕಿ ರಫ್ತು 2025-26ನೇ ಹಣಕಾಸು ವರ್ಷದಲ್ಲಿ ಹಿಂದಿನ ವರ್ಷದೊಂದಿಗೆ ಹೋಲಿಸಿದರೆ ಶೇ.7.5ರಷ್ಟು ಇಳಿದು 11.53 ಬಿಲಿಯನ್ ಡಾಲರ್‌ ಗೆ ತಲುಪಿದೆ.

ಆದರೆ, 2025-26ನೇ ಹಣಕಾಸು ವರ್ಷದ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಅಕ್ಕಿ ರಫ್ತು ವರ್ಷದಿಂದ ವರ್ಷಕ್ಕೆ ಶೇ.4ಕ್ಕಿಂತ ಹೆಚ್ಚು ಏರಿಕೆ ಕಂಡು ಸುಮಾರು 3.03 ಬಿಲಿಯನ್ ಡಾಲರ್‌ಗೆ ತಲುಪಿದೆ. ಜೂನ್ ತಿಂಗಳಲ್ಲಿ ಮಾತ್ರ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಅಕ್ಕಿ ರಫ್ತಾಗಿದ್ದು, ಕಳೆದ ವರ್ಷದ ಇದೇ ತಿಂಗಳಿನೊಂದಿಗೆ ಹೋಲಿಸಿದರೆ ಸುಮಾರು ಶೇ.16ರಷ್ಟು ಹೆಚ್ಚಳ ದಾಖಲಾಗಿದೆ. ಪ್ರಾದೇಶಿಕ ಉದ್ವಿಗ್ನತೆ ತಾತ್ಕಾಲಿಕವಾಗಿ ಸಡಿಲಗೊಂಡಿರುವುದು ಮತ್ತು ಗಲ್ಫ್ ಮಾರುಕಟ್ಟೆಗಳಿಗೆ ಪೂರೈಕೆ ಸರಪಳಿಯ ಭಾಗಶಃ ಪುನಃಸ್ಥಾಪನೆಯು ಇದಕ್ಕೆ ಕಾರಣವಾಗಿದೆ.

ಸೌದಿ ಅರೇಬಿಯಾ ಭಾರತದ ಬಾಸ್ಮತಿ ಅಕ್ಕಿಯ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದ್ದು, ವಾರ್ಷಿಕವಾಗಿ ಸುಮಾರು 1.2 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇರಾನ್ ಸುಮಾರು 0.8 ಮಿಲಿಯನ್ ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಂಡಿದೆ.

ಈ ಎರಡೂ ರಾಷ್ಟ್ರಗಳು ಸೇರಿ ಭಾರತದ ವಾರ್ಷಿಕ ಬಾಸ್ಮತಿ ಅಕ್ಕಿ ರಫ್ತಿನ ಸುಮಾರು 2 ಮಿಲಿಯನ್ ಮೆಟ್ರಿಕ್ ಟನ್ ಪಾಲನ್ನು ಹೊಂದಿವೆ. ಹೀಗಾಗಿ ಗಲ್ಫ್ ಸಮುದ್ರ ಮಾರ್ಗಗಳಲ್ಲಿನ ಸ್ಥಿರತೆ ಬಾಸ್ಮತಿ ಉದ್ಯಮಕ್ಕೆ ನಿರ್ಣಾಯಕವಾಗಿದೆ.

The New Indian Express ನೊಂದಿಗೆ ಮಾತನಾಡಿದ ಬಾಸ್ಮತಿ ಅಕ್ಕಿ ಗಿರಣಿಗಳು ಮತ್ತು ರಫ್ತುದಾರರ ಸಂಘದ ಉಪಾಧ್ಯಕ್ಷ ರಂಜಿತ್ ಸಿಂಗ್ ಜೋಸನ್, ಸೌದಿ ಅರೇಬಿಯಾ ಭಾರತೀಯ ಅಕ್ಕಿಯ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದ್ದು, ಇರಾನ್ ಭಾರತೀಯ ಬಾಸ್ಮತಿ ರಫ್ತಿನ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿ ಉಳಿದಿದೆ. ಕೆಂಪು ಸಮುದ್ರ ಮತ್ತು ಹಾರ್ಮುಝ್ ಜಲಸಂಧಿಯಲ್ಲಿನ ಅಡಚಣೆಗಳು ದೀರ್ಘಕಾಲ ಮುಂದುವರಿದರೆ ಭಾರತದ ಬಾಸ್ಮತಿ ರಫ್ತು, ಬಂದರು ಕಾರ್ಯಾಚರಣೆ, ಕಂಟೇನರ್ ಲಾಜಿಸ್ಟಿಕ್ಸ್ ಮತ್ತು ರಫ್ತುದಾರರ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದರು.

ಹಾರ್ಮುಝ್ ಜಲಸಂಧಿಯ ಮೂಲಕ ಸಾಗಣೆಗೆ ಸಂಬಂಧಿಸಿದ ದೀರ್ಘಕಾಲದ ಅನಿಶ್ಚಿತತೆಯಿಂದಾಗಿ ಗುಜರಾತ್‌ನ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳಲ್ಲಿನ ಕಂಟೇನರ್ ಸರಕು ಸಾಗಣೆ ಕೇಂದ್ರಗಳಲ್ಲಿ ಸುಮಾರು 0.5 ಮಿಲಿಯನ್ ಮೆಟ್ರಿಕ್ ಟನ್ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿ ಸಿಲುಕಿಕೊಂಡಿದೆ. ಇದರಲ್ಲಿ 0.3 ಮಿಲಿಯನ್ ಮೆಟ್ರಿಕ್ ಟನ್‌ಗಿಂತ ಹೆಚ್ಚು ಅಕ್ಕಿ ಮೂಲತಃ ಇರಾನ್‌ಗೆ ಸಾಗಬೇಕಾಗಿತ್ತು. ಇದರಲ್ಲಿ ಇರಾನ್‌ನ ಸರ್ಕಾರಿ ವ್ಯಾಪಾರ ನಿಗಮ (ಉಖಿಅ) ಮತ್ತು ಹಲವು ಖಾಸಗಿ ಇರಾನಿನ ಆಮದುದಾರರು ಒಪ್ಪಂದ ಮಾಡಿಕೊಂಡ ಸಾಗಣೆಗಳೂ ಸೇರಿವೆ. ಹಾರ್ಮುಝ್ ಜಲಸಂಧಿ ಮತ್ತು ಬಾಬ್ ಅಲ್-ಮಂದಾಬ್ ಸುತ್ತಲಿನ ಏಕಕಾಲದ ಅಡಚಣೆ ಭಾರತದ ರಫ್ತು ವಲಯಕ್ಕೆ ಅಭೂತಪೂರ್ವ ಸವಾಲು ಸೃಷ್ಟಿಸಿದೆ ಎಂದು ಅವರು ಹೇಳಿದರು.

ಸೌದಿ ಅರೇಬಿಯಾ ಮತ್ತು ಇರಾನ್ ಸೇರಿ ವರ್ಷಕ್ಕೆ ಸುಮಾರು 2 ಮಿಲಿಯನ್ ಮೆಟ್ರಿಕ್ ಟನ್ ಭಾರತೀಯ ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ. ಮಧ್ಯಪ್ರಾಚ್ಯವು ಭಾರತದ ಪ್ರಮುಖ ರಫ್ತು ಮಾರುಕಟ್ಟೆಗಳಲ್ಲಿ ಒಂದಾಗಿರುವುದರಿಂದ ಈ ಕಾರ್ಯತಂತ್ರದ ಹಡಗು ಮಾರ್ಗಗಳಲ್ಲಿ ಉಂಟಾಗುವ ಯಾವುದೇ ಅಡಚಣೆಯು ಭಾರತದ ಕೃಷಿ ರಫ್ತು ಮತ್ತು ಜಾಗತಿಕ ಆಹಾರ ಪೂರೈಕೆ ಸರಪಳಿಯ ಮೇಲೆ ತಕ್ಷಣ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಹೌತಿಗಳ ಪುನರಾವರ್ತಿತ ಎಚ್ಚರಿಕೆಗಳ ಬಳಿಕ ಕೆಂಪು ಸಮುದ್ರದಲ್ಲಿನ ಭದ್ರತಾ ಬೆದರಿಕೆಗಳು ಜಿದ್ದಾ, ಜಿಝಾನ್, ಅಕಾಬಾ ಸೇರಿದಂತೆ ಇತರ ಪ್ರಾದೇಶಿಕ ಬಂದರುಗಳ ಮೂಲಕ ಕಂಟೇನರ್ ಸಂಚಾರವನ್ನು ಗಮನಾರ್ಹವಾಗಿ ನಿಧಾನಗೊಳಿಸಿವೆ. ಹಾರ್ಮುಝ್ ಜಲಸಂಧಿಯಲ್ಲಿನ ಅನಿಶ್ಚಿತತೆಯೂ ಹಲವು ತಿಂಗಳುಗಳಿಂದ ಸರಕು ಸಾಗಣೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜೋಸನ್ ತಿಳಿಸಿದರು.

ಸುಮಾರು ಒಂದು ತಿಂಗಳ ಹಿಂದೆ ಭಾರತದಿಂದ ಇರಾನ್‌ ಗೆ ಹೊರಟಿದ್ದ ಸರಕು ಹಡಗು ಸಮುದ್ರ ನಿರ್ಬಂಧಗಳು ಮತ್ತು ಪ್ರದೇಶದಲ್ಲಿನ ಕಾರ್ಯಾಚರಣೆಯ ಅನಿಶ್ಚಿತತೆಯಿಂದ ಜಾಮ್‌ನಗರ ಬಂದರಿಗೆ ಹಿಂದಿರುಗಿದೆ ಎಂದು ಅವರು ಹೇಳಿದರು.

ಇದಲ್ಲದೆ, ಇರಾನ್‌ ಗೆ ಭಾರತೀಯ ರಫ್ತು ಸರಕುಗಳನ್ನು ಸಾಗಿಸಲು ನಿಗದಿಯಾಗಿದ್ದ ಮೂರು ಹಡಗುಗಳ ಬುಕಿಂಗ್‌ಗಳನ್ನು ಹಡಗು ಮಾಲೀಕರು ರದ್ದುಗೊಳಿಸಿರುವುದಾಗಿ ವರದಿಯಾಗಿದೆ. ಇದರಿಂದ ಸಾಗಣೆಗೆ ಕಾಯುತ್ತಿರುವ ರಫ್ತು ಸರಕುಗಳ ಬಾಕಿ ಹೆಚ್ಚಿದ್ದು, ಇರಾನಿನ ಖರೀದಿದಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಫ್ತುದಾರರಲ್ಲಿ ಅನಿಶ್ಚಿತತೆ ಮತ್ತಷ್ಟು ಹೆಚ್ಚಿದೆ ಎಂದು ಅವರು ಹೇಳಿದರು.

ವಿಳಂಬಿತ ಸಾಗಣೆ ಮಾತ್ರವಲ್ಲದೆ ಕಾರ್ಯ ಬಂಡವಾಳದ ಸಮಸ್ಯೆಯೂ ತೀವ್ರಗೊಂಡಿದೆ. ಭತ್ತ ಖರೀದಿ, ಗಿರಣಿ, ಸಂಸ್ಕರಣೆ, ಪ್ಯಾಕೇಜಿಂಗ್, ಸಾರಿಗೆ ಮತ್ತು ಬಂದರು ನಿರ್ವಹಣೆಗೆ ಈಗಾಗಲೇ ಹೂಡಿಕೆ ಮಾಡಲಾಗಿದೆ. ಸಾಗಣೆಗಳು ವಾರಗಳು ಅಥವಾ ತಿಂಗಳುಗಳ ಕಾಲ ಸಿಲುಕಿಕೊಂಡರೆ ಕಾರ್ಯ ಬಂಡವಾಳವೇ ಸ್ಥಗಿತಗೊಳ್ಳುತ್ತದೆ. ಬ್ಯಾಂಕುಗಳು ಬಡ್ಡಿ ವಿಧಿಸುತ್ತಲೇ ಇರುತ್ತವೆ. ಇದರಿಂದ ರಫ್ತುದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಜೋಸನ್ ಹೇಳಿದರು.

ಹಾರ್ಮುಝ್ ಜಲಸಂಧಿ ಮತ್ತು ಬಾಬ್ ಅಲ್-ಮಂದಾಬ್ ಮೂಲಕ ಸಾಮಾನ್ಯ ಹಡಗು ಸಂಚಾರವನ್ನು ಶೀಘ್ರ ಪುನಃಸ್ಥಾಪಿಸದಿದ್ದರೆ ಇದರ ಪರಿಣಾಮ ಭಾರತದ ರಫ್ತು ವಲಯವನ್ನು ಮೀರಿ ಜಾಗತಿಕ ಆಹಾರ ಪೂರೈಕೆ ಸರಪಳಿಯ ಮೇಲೂ ಬೀಳಬಹುದು. ಬಿಕ್ಕಟ್ಟು ಮುಂದುವರಿದಷ್ಟೂ ರಫ್ತುದಾರರ ಮೇಲಿನ ಆರ್ಥಿಕ ಹೊರೆ ಹಾಗೂ ಜಾಗತಿಕ ಖರೀದಿದಾರರ ವೆಚ್ಚವೂ ಹೆಚ್ಚಲಿದೆ ಎಂದು ಅವರು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಬಾಲ್ ಕ್ರಿಶನ್ ಬಾಲಿ ಮಾತನಾಡಿ, ಅನಿಶ್ಚಿತತೆಯಿಂದ ಸಮುದ್ರ ಸರಕು ಸಾಗಣೆ ದರಗಳು ದಾಖಲೆ ಮಟ್ಟಕ್ಕೆ ಏರಿದ್ದು, ಸಮುದ್ರ ವಿಮಾ ಕಂತುಗಳೂ ಹೆಚ್ಚುತ್ತಿವೆ. ಇದರಿಂದ ರಫ್ತು ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಕೆಂಪು ಸಮುದ್ರದ ಬಿಕ್ಕಟ್ಟಿನಿಂದ ಹಡಗುಗಳು ದೀರ್ಘ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕಾಗುತ್ತಿದ್ದು, ಇದರಿಂದ ಲಾಜಿಸ್ಟಿಕ್ಸ್ ವೆಚ್ಚ ಹಾಗೂ ಸಾಗಣೆ ಅವಧಿ ಎರಡೂ ಹೆಚ್ಚುತ್ತಿವೆ ಎಂದು ಹೇಳಿದರು.

"ಕೆಂಪು ಸಮುದ್ರದಲ್ಲಿನ ಅಡಚಣೆ ಭಾರತೀಯ ಅಕ್ಕಿ ರಫ್ತಿಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಉದ್ದವಾದ ಸಮುದ್ರ ಮಾರ್ಗಗಳಿಂದ ಸರಕು ಸಾಗಣೆ ವೆಚ್ಚ ಹೆಚ್ಚುತ್ತಿದೆ ಮತ್ತು ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಇದರ ಪರಿಣಾಮ ಮಧ್ಯಪ್ರಾಚ್ಯ ಮತ್ತು ಯುರೋಪಿನ ಖರೀದಿದಾರರಿಗೆ ಭಾರತೀಯ ಅಕ್ಕಿ ಇನ್ನಷ್ಟು ದುಬಾರಿಯಾಗುತ್ತಿದೆ" ಎಂದು ಬಾಲಿ ಹೇಳಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries