ಲಖನೌ: ಉಗ್ರರಿಗೆ ಹಣಕಾಸು ನೆರವು ಮತ್ತು ಅಕ್ರಮ ನುಸುಳುವಿಕೆ ಜಾಲಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ನಾಲ್ಕು ರಾಜ್ಯಗಳ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ (ಪಿಎಂಎಲ್‌ಎ) ಈ ದಾಳಿ ನಡೆಸಲಾಗಿದೆ. ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ಪಶ್ಚಿಮ ಬಂಗಾಳದ ಸುಮಾರು 13 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ರೋಹಿಂಗ್ಯಾ ಮತ್ತು ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಅಕ್ರಮವಾಗಿ ನುಸುಳಲು ಅನುಕೂಲ ಮಾಡಿಕೊಡುವುದು, ಅವರಿಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಟ್ಟು, ದೇಶದ ಬೇರೆ ಬೇರೆ ಕಡೆಗಳಲ್ಲಿ ನೆಲೆಸಲು ಸಹಾಯ ಮಾಡುತ್ತಿದ್ದ ಸಂಘಟಿತ ಜಾಲಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ದಾಖಲಿಸಿದ್ದ ದೂರಿನ ಆಧಾರದ ಮೇಲೆ ಇ.ಡಿ ಈ ತನಿಖೆ ಕೈಗೆತ್ತಿಕೊಂಡಿದೆ.
ಕೆಲವು ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳು ವಿದೇಶದಿಂದ ಭಾರಿ ಮೊತ್ತದ ಹಣವನ್ನು ದೇಣಿಗೆಯಾಗಿ ಪಡೆಯುತ್ತಿರುವುದು ಎಟಿಎಸ್ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ ಹಣವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲು, ಹಲವಾರು ಬ್ಯಾಂಕ್ ಖಾತೆಗಳು ಹಾಗೂ ಇತರರ ಹೆಸರಿನ ನಕಲಿ ಖಾತೆಗಳ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಹಣವನ್ನು ತಲುಪಿಸಲು ಬ್ಯಾಂಕ್‌ನಿಂದ ನೇರವಾಗಿ ನಗದು ಹಣವನ್ನು ಹಿಂಪಡೆಯಲಾಗುತ್ತಿತ್ತು ಮತ್ತು ಸಣ್ಣ ಸಣ್ಣ ಮೊತ್ತದಲ್ಲಿ ಆನ್‌ಲೈನ್ ವರ್ಗಾವಣೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

