ನವದೆಹಲಿ: ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಗುರುವಾರ 19ನೇ ದಿನಕ್ಕೆ ಕಾಲಿಟ್ಟಿದ್ದು, ದೇಹದ ತೂಕ 9 ಕೆ.ಜಿಯಷ್ಟು ಕಡಿಮೆಯಾಗಿದೆ.
ಸೊನಮ್ ಅವರು ಹೀಗೆಯೇ ಉಪವಾಸ ಮುಂದುವರಿಸಿದರೆ, ದೇಹದ ಅಂಗಾಂಗಗಳ ಮೇಲೆ ಪರಿಣಾಮ ಬೀರಲಿದೆ ಎಂದು ಡಾ.ಸತೀಶ್ ಲಂಬಾ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ರಾತ್ರಿ ಹಂಚಿಕೊಂಡ ವಿಡಿಯೊ ಸಂದೇಶದಲ್ಲಿ ವಾಂಗ್ಚೂಕ್, 'ಉಪವಾಸ ಅಂತ್ಯಗೊಳಿಸುವಂತೆ ಸಾವಿರಾರು ಮಂದಿ ನನಗೆ ಸಂದೇಶ ಕಳುಹಿಸಿದ್ದಾರೆ. ಅನೇಕ ಹಿರಿಯ ರಾಜಕಾರಣಿಗಳು ನನ್ನ ಬಳಿಗೆ ಬಂದು ಪ್ರೀತಿ, ಕಾಳಜಿಯಿಂದ ಮಾತನಾಡಿದ್ದಾರೆ. ಆದರೆ ನಾನು ಈಗ ಉಪವಾಸ ಬಿಟ್ಟರೆ ಸರ್ಕಾರಕ್ಕೆ ಏನು ಸಂದೇಶ ಹೋಗುತ್ತದೆ? ಪ್ರತಿಭಟನೆ ಮಾಡುವವರು ಬಂದು ಹಾಗೇ ಹೊರಟು ಹೋಗುತ್ತಾರೆ, ಅವರಿಗೆ ನಾವು ಉತ್ತರ ಕೊಡುವ ಅಗತ್ಯವಿಲ್ಲ ಎಂದು ಸರ್ಕಾರ ಅಂದುಕೊಳ್ಳುತ್ತದೆ. ಉಪವಾಸ ಕೊನೆಗೊಳಿಸಿದರೆ ಏನು ಬದಲಾಗುತ್ತದೆ' ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, ಉಪವಾಸ ನಿಲ್ಲಿಸಲು ಕೇಳುವ ಬದಲು, ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿರುವ ಸಂಸತ್ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಂದು ಅವರು ವಿದ್ಯಾರ್ಥಿಗಳು ಹಾಗೂ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ವಾಂಗ್ಚೂಕ್ ಅವರ ಹೋರಾಟಕ್ಕೆ ವಿವಿಧ ಕ್ಷೇತ್ರಗಳ ನಾಯಕ ಹಾಗೂ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಿದೆ.
ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಗುರುವಾರ ಸಂಜೆ ಜಂತರ್ ಮಂತರ್‌ನಲ್ಲಿ ವಾಂಗ್ಚೂಕ್ ಅವರನ್ನು ಭೇಟಿಯಾಗುವುದಾಗಿ ಘೋಷಿಸಿದ್ದಾರೆ. ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ, ನಟ ಸಯಾಜಿ ಶಿಂದೆ ಮತ್ತು ಲೇಖಕಿ ಶೋಭಾ ಡೇ ಅವರು ವಾಂಗ್ಚೂಕ್ ಅವರೊಂದಿಗೆ ಮಾತುಕತೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಾಂಗ್ಚೂಕ್ ಅವರ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವಂತೆ ದೆಹಲಿ ಹೈಕೋರ್ಟ್, ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ವಾಂಗ್ಚೂಕ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

