ಮುಂಬೈ: ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಎರಡು ಗಂಟೆ ಅವಧಿಯಲ್ಲಿ ನಾಲ್ಕು ಬಾರಿ ಭೂಕಂಪ ಸಂಭವಿಸಿದೆ. ನೆರೆಯ ಜಿಲ್ಲೆಗಳಾದ ನಾಂದೇಡ, ಲಾತೂರ್ ಹಾಗೂ ಪರ್ಭಾನಿಯಲ್ಲೂ ಭೂಮಿ ಕಂಪಿಸಿದೆ.
ಬುಧವಾರ ತಡರಾತ್ರಿ ಸತತವಾಗಿ ಭೂಮಿ ಕಂಪಿಸಿದ್ದು, ಭಯಭೀತರಾದ ಜನ ಮನೆಗಳಿಂದ ಹೊರ ಬಂದಿದ್ದರು.
ಹಿಂಗೋಲಿಯಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಮನೆಗಳಲ್ಲಿ ಬಿರುಕು ಮೂಡಿವೆ ಎಂದು ವರದಿಯಾಗಿದೆ. ತಡರಾತ್ರಿ 2.15ಕ್ಕೆ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಹಿಂಗೋಲಿಯಲ್ಲಿ ಸಂಭವಿಸಿದೆ. ಬಳಿಕ 2.17ಕ್ಕೆ 3.9 ಮತ್ತು 3.23ಕ್ಕೆ 4.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ರಾತ್ರಿ 1.37ಕ್ಕೆ, ಭೂಮೇಲ್ಮೈನಿಂದ 10 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ನಾಲ್ಕು ಬಾರಿ ಸಂಭವಿಸಿದ ಕಂಪನಗಳಲ್ಲಿ ಇದು ಪ್ರಬಲವಾಗಿದೆ. ಇದರ ಕೇಂದ್ರಬಿಂದು, ಹಿಂಗೋಲಿಯ ಪಂಗ್ರಾ ಶಿಂದೆ ಗ್ರಾಮದಲ್ಲಿದೆ.
'ಜನರು ಭಯಭೀತರಾಗಬಾರದು ಮತ್ತು ವದಂತಿಗಳನ್ನು ಹರಡುವುದು ಹಾಗೂ ನಂಬುವುದನ್ನು ಮಾಡಬಾರದು' ಎಂದು ಹಿಂಗೋಲಿ ಜಿಲ್ಲಾಧಿಕಾರಿ ರಾಹುಲ್ ಗುಪ್ತಾ ಅವರು ಮನವಿ ಮಾಡಿದ್ದಾರೆ.

