ಅಟ್ಲಾಂಟಾ: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ನಲ್ಲಿ ಈಜಿಪ್ಟ್ ವಿರುದ್ಧ 0-2 ಗೋಲುಗಳ ಹಿನ್ನೆಡೆಯ ನಡುವೆಯೂ ಅದ್ಭುತ ಪುನರಾಗಮನ ಮಾಡಿರುವ ಹಾಲಿ ಚಾಂಪಿಯನ್ ಅರ್ಜೆಂಟೀನಾ, 3-2ರ ಗೋಲುಗಳ ಅಂತರದಲ್ಲಿ ಪಂದ್ಯವನ್ನು ಗೆದ್ದು ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ.
ಈ ಪಂದ್ಯದಲ್ಲಿ ಆರಂಭದಲ್ಲಿ ಪೆನಾಲ್ಟಿ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದ ಅರ್ಜೆಂಟೀನಾದ ನಾಯಕ ಲಯೊನೆಲ್ ಮೆಸ್ಸಿ, ಪಂದ್ಯದ ನಿರ್ಣಾಯಕ ಹಂತದಲ್ಲಿ ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ ಅಮೂಲ್ಯ ಜಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದರೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಸತತ ಒಂಬತ್ತು ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಪಂದ್ಯದ 83ನೇ ನಿಮಿಷದಲ್ಲಿ ಮಿಂಚಿದ ಮೆಸ್ಸಿ ಭರ್ಜರಿ ಗೋಲು ದಾಖಲಿಸಿ ತಾವೇಕೆ ಶ್ರೇಷ್ಠ ಆಟಗಾರ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದ್ದಾರೆ.
ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ ಟೂರ್ನಿಯ 'ಗೋಲ್ಡನ್ ಬೂಟ್' ರೇಸ್ನಲ್ಲೂ ಮುಂಚೂಣಿಯಲ್ಲಿರುವ ಮೆಸ್ಸಿ ಈವರೆಗೆ ಐದು ಪಂದ್ಯಗಳಲ್ಲಿ ಒಟ್ಟು ಎಂಟು ಗೋಲುಗಳನ್ನು ಗಳಿಸಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಅವರದ್ದೇ ಹೆಸರನಲ್ಲಿರುವ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಇದೇ ವಿಶ್ವಕಪ್ನಲ್ಲಿ ಈ ದಾಖಲೆ ತಮ್ಮದಾಗಿಸಿಕೊಂಡಿರುವ ಮೆಸ್ಸಿ, ಈವರೆಗೆ 21 ಗೋಲುಗಳನ್ನು ಗಳಿಸಿದ್ದಾರೆ.
ವಿಶ್ವಕಪ್ನ ನಾಕೌಟ್ ಹಂತದ ಸತತ ಆರು ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಮೆಸ್ಸಿ ಪಾತ್ರರಾಗಿದ್ದಾರೆ. ಅಲ್ಲದೆ, ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅರ್ಜೆಂಟೀನಾ ಪರ ಅತಿ ಹೆಚ್ಚು (8) ಗೋಲು ಗಳಿಸಿದ ಗಿಲ್ಲೆರ್ಮೊ ಸ್ಟೇಬೈಲ್ (1930) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪಂದ್ಯದ ಮೊದಲಾರ್ಧದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಮೆಸ್ಸಿ ವಿಫಲರಾದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 4 ಪೆನಾಲ್ಟಿ ಕಿಕ್ಗಳನ್ನು ಕೈಚೆಲ್ಲಿದ ಮೊದಲ ಆಟಗಾರ ಎಂಬ ಅನಗತ್ಯ ದಾಖಲೆಯೂ ಮೆಸ್ಸಿ ಅವರದ್ದಾಯಿತು. ಈ ಬಾರಿ ಎರಡನೇ ಸಲ ಪೆನಾಲ್ಟಿ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ.
'ಗೋಲ್ಡನ್ ಬೂಟ್' ರೇಸ್...
ಈ ಬಾರಿಯ ವಿಶ್ವಕಪ್ನಲ್ಲಿ 'ಗೋಲ್ಡನ್ ಬೂಟ್'ಗಾಗಿ ಮೆಸ್ಸಿ, ಫ್ರಾನ್ಸ್ನ ಕೈಲಿಯನ್ ಎಂಬಾಪೆ ಹಾಗೂ ನಾರ್ವೆಯ ಎರ್ಲಿಂಗ್ ಹಾಲಂಡ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.
ಲಯೊನೆಲ್ ಮೆಸ್ಸಿ: 8 ಗೋಲು
ಕೈಲಿಯನ್ ಎಂಬಾಪೆ: 7 ಗೋಲು
ಎರ್ಲಿಂಗ್ ಹಾಲಂಡ್: 7 ಗೋಲು
ಹ್ಯಾರಿ ಕೇನ್: 6 ಗೋಲು

(ಕೃಪೆ: ಫಿಫಾ)
2022ರಲ್ಲಿ ಗೋಲ್ಡನ್ ಬೂಟ್ ವಿಜೇತರಾದ ಎಂಬಾಪೆ, ಈ ಬಾರಿಯೂ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮತ್ತು ಫ್ರಾನ್ಸ್ ತಂಡವನ್ನು ಸತತ ಮೂರನೇ ಬಾರಿಗೆ ವಿಶ್ವಕಪ್ ಫೈನಲ್ಗೆ ಕೊಂಡೊಯ್ಯುವ ಪಣ ತೊಟ್ಟಿದ್ದಾರೆ. ಒಟ್ಟಾರೆಯಾಗಿ ವಿಶ್ವಕಪ್ನಲ್ಲಿ 19 ಗೋಲು ಗಳಿಸಿದ್ದು, ಮೆಸ್ಸಿ ದಾಖಲೆಯ ಸನಿಹದಲ್ಲಿದ್ದಾರೆ.

