ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿಯಲ್ಲಿ ಸುರಂಗ ರಸ್ತೆ ನಿರ್ಮಾಣದ ಸ್ಥಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಐವರಿಗಾಗಿ ಬುಧವಾರ ಎರಡನೇ ದಿನವೂ ಕಾರ್ಯಾಚರಣೆ ಮುಂದುವರಿದಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಪೊಲೀಸರು ಅಸಹಜ ಮರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತರನ್ನು ವಲಸೆ ಕಾರ್ಮಿಕರಾದ ಮಧ್ಯಪ್ರದೇಶದ ಯಂತ್ರ ಚಾಲಕ ಚಂದ್ರಭಾನ್, ಬಿಹಾರದ ಬಿಕಾಶ್ ಕುಮಾರ್ ಮತ್ತು ಜಾರ್ಖಂಡ್ ನ ಅನ್ಮೋಲ್ ಎಂದು ಗುರುತಿಸಲಾಗಿದೆ. ಏಳು ಗಾಯಾಳುಗಳನ್ನು ಮೆಪ್ಪಾಡಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಯನಾಡು ಪೊಲೀಸ್ ವರಿಷ್ಠಾಧಿಕಾರಿ ದೇವಮನೋಹರ್, ಹುಡುಕಾಟದ ಕಾರ್ಯಾಚರಣೆಗಾಗಿ ಶ್ವಾನ ದಳ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ನಿಯೋಜಿಸಲಾಗಿದ್ದು, ಭೂಕುಸಿತ ಪೀಡಿತ ಪ್ರದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದರು.
"ನದಿಯ ಕೆಳಗಿನ ಹರಿವಿನ ಪ್ರದೇಶಗಳಲ್ಲೂ ಹುಡುಕಾಟ ನಡೆಸಲಾಗುತ್ತಿದೆ. ಚೂರಲ್ಮಲಾಗೆ ಹೋಗುವ ರಸ್ತೆಯನ್ನು ತೆರವುಗೊಳಿಸಲಾಗಿದೆ. ಆದರೆ ಭೂಕುಸಿತ ಸಂಭವಿಸಿದ ಸ್ಥಳದಿಂದ ಇನ್ನೂ ಹೆಚ್ಚಿನ ಪ್ರಮಾಣದ ಮಣ್ಣನ್ನು ಹೊರತೆಗೆಯಬೇಕಾಗಿದೆ. ಹುಡುಕಾಟದ ಕಾರ್ಯಾಚರಣೆ ಮುಗಿದ ನಂತರವಷ್ಟೇ ಈ ಕೆಲಸವನ್ನು ಕೈಗೆತ್ತಿಕೊಳ್ಳಬಹುದು" ಎಂದು ಅವರು ತಿಳಿಸಿದರು.
ಆರೋಪ-ಪ್ರತ್ಯಾರೋಪ
ಭೂಕುಸಿತವನ್ನು ಮಾನವ ನಿರ್ಮಿತ ವಿಕೋಪ ಎಂದು ಹೇಳಿರುವ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಸಚಿವ ಪಿ.ಕೆ. ಬಶೀರ್ ಅವರ ಸೂಚನೆಯ ಹೊರತಾಗಿಯೂ ನಿರ್ಮಾಣ ಸ್ಥಳದಲ್ಲಿ ಸಂಗ್ರಹವಾಗಿದ್ದ ಮಣ್ಣನ್ನು ನಿರ್ಮಾಣ ಕಂಪನಿಯು ತೆರವುಗೊಳಿಸಿರಲಿಲ್ಲ ಎಂದು ಆರೋಪಿಸಿದೆ.
ಆದರೆ ನಿರ್ಮಾಣ ಕಂಪನಿಯ ಜನರಲ್ ಮ್ಯಾನೇಜರ್ ಈ ಆರೋಪವನ್ನು ತಳ್ಳಿಹಾಕಿದ್ದು, ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕಿಂತ ಸಾಕಷ್ಟು ಎತ್ತರದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿರ್ಮಾಣಕ್ಕಾಗಿ ಕಂಪನಿಗೆ ನೀಡಲಾದ ಜಾಗದಲ್ಲಿ ಈ ಘಟನೆ ನಡೆದಿಲ್ಲ ಮತ್ತು ಅಲ್ಲಿ ಸಂಗ್ರಹವಾಗಿದ್ದ ಮಣ್ಣು ಈ ವಿಕೋಪಕ್ಕೆ ಕಾರಣವಲ್ಲ ಎಂದು ಅವರು ಹೇಳಿದ್ದಾರೆ.
ಕಂಪನಿಯ ಈ ಪ್ರತಿಕ್ರಿಯೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್. ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಭೂಕುಸಿತವು ನಿರ್ಮಾಣ ಸ್ಥಳದ ಮೇಲ್ಭಾಗದಲ್ಲಿ ಆರಂಭವಾಗಿದ್ದರೂ, ಆ ಪ್ರದೇಶದಲ್ಲಿ ಸಂಗ್ರಹವಾಗಿದ್ದ ಮಣ್ಣು ಕುಸಿತದ ತೀವ್ರತೆಯನ್ನು ಹೆಚ್ಚಿಸಿತು. ಅಲ್ಲದೆ, ಪ್ರಸ್ತುತ ಸುರಿಯುತ್ತಿರುವ ಮಳೆಯು, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದೆ ಎಂದು ಹೇಳಿದ್ದಾರೆ.

