ನವದೆಹಲಿ: ಮಧ್ಯಪ್ರದೇಶದ ಧಾರ್ ನಗರದಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣಕ್ಕೆ ಹೊಂದಿಕೊಂಡಿರುವ ದರ್ಗಾದ ಆವರಣದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದಕ್ಕೆ ಮುಸ್ಲಿಮರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ಶುಕ್ರವಾರಗಳಂದು ಈ ಸ್ಥಳದಲ್ಲಿ ಮಧ್ಯಾಹ್ನ 1ರಿಂದ 3ರ ನಡುವೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡುವುದನ್ನು ಖಾತ್ರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ.ಮೋಹನಾ ಅವರು ಇದ್ದ ಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
ಶುಕ್ರವಾರದ ಪ್ರಾರ್ಥನೆಗಾಗಿ ರಾಜ್ಯ ಸರ್ಕಾರ ಹಾಗೂ ಮುಸ್ಲಿಂ ಕಡೆಯವರು ಪರಸ್ಪರ ಒಪ್ಪಿಗೆ ಮೇಲೆ ಬೇರೆ ಜಾಗ ಪರಿಶೀಲಿಸುವುದಕ್ಕೆ ಈ ನಿರ್ದೇಶನ ಅಡ್ಡಿಯಾಗುವುದಿಲ್ಲ ಎಂದೂ ಪೀಠವು ಸ್ಪಷ್ಟಪಡಿಸಿದೆ.

