ನವದೆಹಲಿ: ಬೋಯಿಂಗ್ ಡ್ರೀಮ್ಲೈನರ್ ವಿಮಾನದ ಇಂಧನ ನಿಯಂತ್ರಣ ಸ್ವಿಚ್ ಲಾಕ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ಯಾವುದೇ ದೋಷ ಪತ್ತೆಯಾಗಿಲ್ಲ ಎಂದು ಸರ್ಕಾರ ತಿಳಿಸಿದೆ.
ಕಳೆದ ಫೆಬ್ರುವರಿಯಲ್ಲಿ ಲಂಡನ್-ಬೆಂಗಳೂರು ವಿಮಾನವನ್ನು ಚಾಲನೆ ಮಾಡಿದ್ದ ಏರ್ಇಂಡಿಯಾ ಪೈಲಟ್ವೊಬ್ಬರು, ವಿಮಾನದ ಇಂಧನ ನಿಯಂತ್ರಣ ಸ್ವಿಚ್ ಲಾಕ್ ವ್ಯವಸ್ಥೆಯಲ್ಲಿ ದೋಷವಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.
ಈ ಬೆನ್ನಲ್ಲೇ ಈ ಬಗ್ಗೆ ಪರಿಶೀಲನೆ ನಡೆಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಬೋಯಿಂಗ್ ಕಂಪನಿಗೆ ಸೂಚಿಸಿತ್ತು.
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವ ಮುರುಳೀಧರ್ ಮೋಹೊಲ್ ಅವರು ರಾಜ್ಯಸಭೆಯಲ್ಲಿ ಈ ಕುರಿತಂತೆ ಲಿಖಿತ ಉತ್ತರ ಸಲ್ಲಿಸಿದ್ದಾರೆ.
ಕಳೆದ ವರ್ಷ ಅಹಮದಾಬಾದ್ನಲ್ಲಿ ಪತನಗೊಂಡ ಬೋಯಿಂಗ್ 787-8 ವಿಮಾನದ ಇಂಧನ ಸ್ವಿಚ್ಗಳ ಬಗ್ಗೆ ಅವರು ಯಾವುದೇ ಉಲ್ಲೇಖ ಮಾಡಿಲ್ಲ. ವಿಮಾನ ಇಂಧನ ನಿಯಂತ್ರಣ ಸ್ವಿಚ್ಗಳು ಒಂದು ಸೆಕೆಂಡ್ ಅಂತರದಲ್ಲಿ ಸ್ವಿಚ್ ಆಫ್ ಆಗಿದ್ದವು ಎಂದು ಪ್ರಕರಣದ ತನಿಖೆಯ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು.

