ಬೀಜಿಂಗ್: ಚೀನಾದಲ್ಲಿ ವಾರದ ಹಿಂದೆಯಷ್ಟೇ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಪ್ರವಾಹಕ್ಕೆ ಈಗಾಗಲೇ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇದರ ಬೆನ್ನಲ್ಲೇ ದೇಶದ ಪೂರ್ವ ಕರಾವಳಿಗೆ ಮತ್ತೊಂದು ಶಕ್ತಿಶಾಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.
ಚಂಡಮಾರುತ 'ಬವೀ' (Typhoon Bav) ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಗಂಟೆಗೆ ಗರಿಷ್ಠ 162 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಬವೀ ಚಂಡಮಾರುತವು ತೈವಾನ್‌ನ ಉತ್ತರ ಭಾಗದ ಮೂಲಕ ಹಾದುಹೋಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ 2.3 ಕೋಟಿ ಜನಸಂಖ್ಯೆ ಇರುವ ತೈವಾನ್ ದ್ವೀಪದಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ತೈವಾನ್ ರಾಜಧಾನಿ ತೈಪೆಯಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ತೈವಾನ್‌ನ ಬಂದರುಗಳಲ್ಲಿ ಮೀನುಗಾರಿಕಾ ದೋಣಿಗಳನ್ನು ಲಂಗರು ಹಾಕಲಾಗಿವೆ. ಶನಿವಾರದವರೆಗೆ ಜಪಾನ್, ಹಾಂಕಾಂಗ್ ಸೇರಿದಂತೆ ವಿವಿಧ ದೇಶಗಳಿಗೆ ನಿಗದಿಯಾಗಿದ್ದ ಹಲವು ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ತೈವಾನ್‌ನ ಪ್ರಮುಖ ಸುದ್ದಿ ಸಂಸ್ಥೆ ವರದಿ ಮಾಡಿದೆ.
'ಬವೀ' ಚಂಡಮಾರುತವನ್ನು ವಿಯೆಟ್ನಾಂ ಹೆಸರಿಸಿದೆ. ಇದು ಉತ್ತರ ವಿಯೆಟ್ನಾಂನಲ್ಲಿರುವ ಬವೀ ಪರ್ವತ ಶ್ರೇಣಿಯನ್ನು ಸೂಚಿಸುತ್ತದೆ.

