HEALTH TIPS

ಉತ್ತರಕ್ಕೆ ಪಟ್ಟು: ಕಲಾಪಕ್ಕೆ ಪೆಟ್ಟು

ನವದೆಹಲಿ: 'ನೀಟ್‌' ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ 'ಪೊಲೀಸರ ಬಲಪ್ರಯೋಗ' ಕುರಿತು ಸರ್ಕಾರದ ಉತ್ತರಕ್ಕೆ ಪಟ್ಟುಹಿಡಿದ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಮಾಡಿದ ಕಾರಣ, ಸಂಸತ್ತಿನ ಉಭಯ ಸದನಗಳ ಕಲಾಪ ಸೋಮವಾರ ನಡೆಯಲಿಲ್ಲ. 


ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ಉದ್ದೇಶದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಪ್ರತಿಭಟನಕಾರರ ಮೇಲಿನ 'ಪೊಲೀಸರ ಕ್ರೌರ್ಯ'ಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದವು. ಹೀಗಾಗಿ, ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು 'ಕ್ರೂರವಾಗಿ ಬಲಪ್ರಯೋಗ' ಮಾಡಿದ್ದರ ಕುರಿತು ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿ, ಪ್ರತಿಭಟಿಸಿದವು. ಈ ಕಾರಣಕ್ಕೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ, ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಮಸೂದೆ ಮಂಡಿಸಿದರು. ಇದರ ಬೆನ್ನಲ್ಲೇ, ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಕ್ರಮಕ್ಕೆ ಉತ್ತರ ನೀಡುವಂತೆ ಆಗ್ರಹಿಸಿದಾಗ, ಗದ್ದಲ ಶುರುವಾಯಿತು.

ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು, ಮಸೂದೆ ಕುರಿತಂತೆ ಸಂಜೆ 5ರವರೆಗೆ ಚರ್ಚೆ ನಡೆಸುವಂತೆ ಸ್ಪೀಕರ್‌ ಓಂ ಬಿರ್ಲಾ ಸೂಚಿಸಿದರು.

ವಿಪಕ್ಷಗಳು ತಮ್ಮ ಪಟ್ಟು ಸಡಿಲಿಸದ ಕಾರಣ, ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು. ಪುನಃ ಕಲಾಪ ಆರಂಭವಾದಾಗಲೂ ಸರ್ಕಾರದ ಉತ್ತರಕ್ಕೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದಾಗ, ಅವರು ಕಲಾಪವನ್ನು ಮತ್ತೆ ಮುಂದೂಡಿದರು.

ಸಂಜೆ 5ಕ್ಕೆ ಕಲಾಪ ಮತ್ತೆ ಆರಂಭವಾಯಿತು. ಆಗ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು,'ಕೆಲ ವಿರೋಧ ಪಕ್ಷಗಳ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದಾರೆ. ಆದರೆ, ಕಾಂಗ್ರೆಸ್‌ ಮತ್ತು ಅದರ ಕೆಲ ಮಿತ್ರ ಪಕ್ಷಗಳು ಅಡ್ಡಿಪಡಿಸುತ್ತಿದ್ದು, ಚರ್ಚೆಗೆ ಅವಕಾಶ ನೀಡುತ್ತಿಲ್ಲ' ಎಂದು ಟೀಕಿಸಿದರು.

ಇದಕ್ಕೆ ವಿರೋಧ ಪಕ್ಷಗಳ ಸದಸ್ಯರಿಂದ ಆಕ್ಷೇಪ ವ್ಯಕ್ತವಾದಾಗ, ಮತ್ತೆ ಗದ್ದಲ ಶುರುವಾಯಿತು. ನಂತರ ಸ್ಪೀಕರ್‌ ಅವರು ದಿನದ ಮಟ್ಟಿಗೆ ಕಲಾಪ ಮುಂದೂಡಿ ರೂಲಿಂಗ್‌ ನೀಡಿದರು.

ರಾಜ್ಯಸಭೆ: ಕಲಾಪ 4 ಬಾರಿ ಮುಂದೂಡಿಕೆ

ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಪಟ್ಟುಹಿಡಿದ ಪರಿಣಾಮ ರಾಜ್ಯಸಭೆ ಕಲಾಪವನ್ನು ನಾಲ್ಕು ಬಾರಿ ಮುಂದೂಡಲಾಯಿತು. ಸಂಜೆ 5.15ಕ್ಕೆ ಕಲಾಪ ಮತ್ತೆ ಆರಂಭವಾದಾಗಲೂ ಸಚಿವ ಶಾ ಅವರ ಹೇಳಿಕೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಮಾತನಾಡಿದ ಸಚಿವ ಕಿರಣ್‌ ರಿಜಿಜು ಮಸೂದೆ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದ್ದು ಇದರಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ಸದಸ್ಯರಿಗೆ ಮನವಿ ಮಾಡಿದರು. 'ಬಹು ಮುಖ್ಯವಾದ ಮಸೂದೆಯನ್ನು ಮಂಡಿಸಲಾಗಿದೆ.

ಈ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ಸದಸ್ಯರಿಗೆ ನಿನ್ನೆಯೂ ಮನವಿ ಮಾಡಿದ್ದೆವು. ಇಂದು ಬೆಳಿಗ್ಗೆಯಿಂದಲೂ ಮನವಿ ಮಾಡುತ್ತಿದ್ದೇವೆ. ಆದರೂ ಅವರು ಚರ್ಚೆಗೆ ಒಪ್ಪುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. 'ವಿರೋಧ ಪಕ್ಷಗಳ ಬೇಡಿಕೆಯಂತೆ ಮಸೂದೆ ಕುರಿತು ಚರ್ಚೆಗೆ ಕಲಾಪ ಸಲಹಾ ಸಮಿತಿಯು ಸಮಯ ಹಂಚಿಕೆ ಮಾಡಿದೆ. ವಿಪಕ್ಷಗಳ ಸಲಹೆಗಳನ್ನು ಆಲಿಸಲು ಸಂಬಂಧಪಟ್ಟ ಸಚಿವರೂ ಸದನದಲ್ಲಿ ಹಾಜರಿದ್ದಾರೆ. ಇಷ್ಟಾದರೂ ನಮಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಸದಸ್ಯರು ಹೊರಗಡೆ ಹೇಳುತ್ತಿದ್ದಾರೆ' ಎಂದು ರಿಜಿಜು ಟೀಕಿಸಿದರು. 'ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಿರಿಯರು. ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಅವರನ್ನೂ ಕೇಳಿಕೊಂಡಿದ್ದೇವೆ. ದೇಶದ ಯುವಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ನಿಮ್ಮ ನಿಲುವು ಬದಲಿಸದಿದ್ದರೆ ಅವರು ನಿಮ್ಮನ್ನು ಶಿಕ್ಷಿಸುತ್ತಾರೆ' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ'ನಾವು ಚರ್ಚೆಯಿಂದ ಓಡಿಹೋಗುತ್ತಿಲ್ಲ. ಅದಕ್ಕೂ ಮೊದಲು ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕು' ಎಂದರು. ಬಳಿಕ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್‌ ಮಸೂದೆ ಕುರಿತು ಮಾತನಾಡುವಂತೆ ಕಾಂಗ್ರೆಸ್‌ ಸದಸ್ಯ ಪ್ರಮೋದ್‌ ತಿವಾರಿ ಅವರಿಗೆ ಸೂಚಿಸಿದರು. ಆಗ ವಿರೋಧ ಪಕ್ಷಗಳ ಸದಸ್ಯರು ಮತ್ತೆ ಗದ್ದಲ ಆರಂಭಿಸಿದಾಗ ಸದನವನ್ನು ಮಂಗಳವಾರ ಬೆಳಿಗ್ಗೆ 11ರವರೆಗೆ ಮುಂದೂಡಲಾಯಿತು.  






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries