ವಾರಣಾಸಿ: 'ಜೆನ್ ಝಿ' ಎಂದು ಕರೆಯಲಾಗುವ ಕಿರಿಯ ತಲೆಮಾರು ಭಾವನಾತ್ಮಕ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವವರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಬಣ್ಣಿಸಿದ್ದಾರೆ. ಆದರೆ, ಅವರು ಹೆಚ್ಚಾಗಿ ''ಶಾಂತ ಮನಸ್ಸಿನಿಂದ'' ಆಲೋಚಿಸುವುದಿಲ್ಲ ಎಂದು ಹೇಳಿದ್ದಾರೆ.
ಅವರು ಹೈದರಾಬಾದ್‌ನಲ್ಲಿ ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು.
ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಬಳಿಕ ಗಮನ ಸೆಳೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆ ನಡೆದ ವಾರಗಳ ನಂತರ ಅವರ ಈ ಹೇಳಿಕೆ ನೀಡಿದ್ದಾರೆ.
ಎಲ್‌ಬಿಟಿಕ್ಯೂ+ ಸಮುದಾಯದ ಬಗ್ಗೆಯೂ ಮಾತನಾಡಿದ ಭಾಗವತ್, ಎಲ್‌ಜಿಬಿಟಿಕ್ಯೂ+ ಸಮುದಾಯ ಭಾರತೀಯ ಸಮಾಜದ ಒಂದು ಭಾಗ ಮತ್ತು ಅವರನ್ನು ಬಹಿಷ್ಕರಿಸಬಾರದು ಎಂದರು.
ಎಲ್‌ಜಿಬಿಟಿಕ್ಯೂ+ಸಮುದಾಯ ಮೊದಲಿನಿಂದಲೂ ಅಸ್ತಿತ್ವದಲ್ಲಿ ಇದೆ. ಇಂತಹ ಪ್ರವೃತ್ತಿಗಳು ಸಮಾಜದಲ್ಲಿ ಇರುತ್ತವೆ. ಕೆಲವು ಜನ್ಮಜಾತವಾಗಿದ್ದು, ಪ್ರಕೃತಿಯಿಂದಲೇ ನಿರ್ಧರಿಸಲ್ಪಡುತ್ತವೆ. ನಾವಾಗಲಿ ಅಥವಾ ಅವರಾಗಲಿ ಏನೂ ಮಾಡಲು ಸಾಧ್ಯವಿಲ್ಲ. ಕೆಲವರಲ್ಲಿ ಅನಂತರದ ಮನಸ್ಥಿತಿ ಮತ್ತು ದೈಹಿಕ ಒಲವುಗಳಿಂದ ಉಂಟಾಗುತ್ತವೆ. ಈ ವಿದ್ಯಾಮಾನ ಪ್ರಪಂಚದಾದ್ಯಂತ ಇರುವುದರಿಂದ. ಅದು ಇಲ್ಲಿ ಇರಲಿಲ್ಲ ಎಂದು ನಾವು ಹೇಳಲಾರೆವು. ನಾವೂ ಮನುಷ್ಯರು ಮತ್ತು ಅದು ನಮ್ಮಲ್ಲೂ ಇತ್ತು ಎಂದು ಅವರು ಹೇಳಿದರು.
ಭಾರತೀಯ ಪರಂಪರೆ ಅವರ ಅಸ್ತಿತ್ವವನ್ನು ಬಹಳ ಹಿಂದಿನಿಂದಲೂ ಒಪ್ಪಿಕೊಂಡಿದೆ ಎಂದು ಹೇಳಿದ ಅವರು, ಕೆಲವರನ್ನು ಗುಣಪಡಿಸಬಹುದು. ಇನ್ನು ಕೆಲವರನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೂ ಅವರು ಮನುಷ್ಯರೇ. ಅವರಿಗೆ ಬದುಕುವ ಹಕ್ಕಿದೆ ಎಂಬುದನ್ನು ಗಮನಿಸಬೇಕು ಎಂದರು.

