ಜಮ್ಮು: ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಜಮ್ಮುವಿನ ಹಲವೆಡೆ ಸೋಮವಾರ ಪ್ರವಾಹ, ಭೂಕುಸಿತ ಸಂಭವಿಸಿದ್ದು, ದೋಡಾ-ಕಿಶ್ತವಾಡ ಹೆದ್ದಾರಿ ಹಾನಿಗೊಳಗಾಗಿದೆ. ಹಲವಾರು ವಾಹನಗಳು ಜಖಂಗೊಂಡಿವೆ.
ಬೃಹತ್ ಪ್ರಮಾಣದಲ್ಲಿ ಮಣ್ಣು, ಬಂಡೆಕಲ್ಲು ಮತ್ತು ಇತರ ಅವಶೇಷಗಳು ರಸ್ತೆಯ ಮೇಲೆ ಬಿದ್ದಿವೆ.
ರಸ್ತೆ ಬದಿ ನಿಲ್ಲಿಸಲಾಗಿದ್ದ ಹಲವು ವಾಹನಗಳು ಅವಶೇಷಗಳಡಿ ಸಿಲುಕಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶ್ತವಾಡ ಜಿಲ್ಲೆಯಲ್ಲಿ 540 ಎಂ.ವಿ ಜಲವಿದ್ಯುತ್ ಯೋಜನೆಯ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಭೂಕುಸಿತ ಸಂಭವಿಸಿದೆ. ಟ್ರಕ್ ಸೇರಿದಂತೆ ಸ್ಥಳದಲ್ಲಿದ್ದ ವಾಹನಗಳು ಮತ್ತು ಯಂತ್ರಗಳು ಮಣ್ಣಿನಡಿ ಸಿಲುಕಿದ್ದವು.
ರಿಯಾಸಿ ಜಿಲ್ಲೆಯಲ್ಲಿಯೂ ಮಳೆಯಿಂದಾಗಿ ಸಣ್ಣ ಪ್ರಮಾಣದಲ್ಲಿ ಅವಘಡಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
24 ಗಂಟೆಗಳಲ್ಲಿ ಸಾಂಬಾ ಜಿಲ್ಲೆಯಲ್ಲಿ 90 ಮಿ.ಮೀ ಮತ್ತು ಕಠುವಾ ಜಿಲ್ಲೆಯಲ್ಲಿ 66 ಮಿ.ಮೀ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ಕಿಶ್ತವಾಡ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿದ್ದವು - ಪಿಟಿಐ ಚಿತ್ರ

