ಹೈದರಾಬಾದ್: ಆಂಧ್ರ ಪ್ರದೇಶದಲ್ಲಿ ಕೆಲ ದಿನಗಳಲ್ಲಿ ಕೋವಿಡ್-19ನಿಂದ ನಾಲ್ವರು ಮೃತಪಟ್ಟಿದ್ದಾರೆ.
ಕಡಪ ಜಿಲ್ಲೆಯಲ್ಲಿ ಮೂವರು, ಕಾಕಿನಾಡ ಜಿಲ್ಲೆಯಲ್ಲಿ ಒಬ್ಬರು ಅಸುನೀಗಿದ್ದಾರೆ. ಈ ನಾಲ್ವರೂ ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ಸಮಸ್ಯೆ ಸೇರಿದಂತೆ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
'ಈ ವರ್ಷದ ಮೊದಲ ಕೋವಿಡ್ ಪ್ರಕರಣ ಜೂನ್ 26ರಂದು ಕಡಪ ಜಿಲ್ಲೆಯಲ್ಲಿ ದಾಖಲಾಗಿತ್ತು. ಜುಲೈ 1 ಮತ್ತು 16ರ ನಡುವೆ 11 ಪ್ರಕರಣಗಳು ಕಂಡುಬಂದಿವೆ. ಕಡಪ ಜಿಲ್ಲೆಯಲ್ಲಿ 8, ಗುಂಟೂರು ಎರಡು, ವಿಶಾಖಪಟ್ಟಣ, ಕಾಕಿನಾಡ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ' ಎಂದು ಆರೋಗ್ಯ ಇಲಾಖೆ ಆಯುಕ್ತ ಜಿ. ವೀರಪಾಂಡಿಯನ್ ಶುಕ್ರವಾರ ತಿಳಿಸಿದ್ದಾರೆ.
'ಈ ವೈರಾಣುವಿನ ತಳಿ ಬಗ್ಗೆ ತಿಳಿಯುವ ಉದ್ದೇಶದಿಂದ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಐದು ಮಾದರಿಗಳನ್ನು ಜುಲೈ 9ರಂದು ಕಳುಹಿಸಲಾಗಿದೆ. ಪ್ರಸ್ತುತ ಮೂವರು ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಮೂವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

