ಕಾಸರಗೋಡು: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅಧ್ಯಕ್ಷತೆ ವಹಿಸಿದ್ದರು. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸದಾ ಸನ್ನದ್ಧರಾಗಿರುವಂತೆ ಮುಂಗಾರು ಸಂಬಂಧಿತ ಕಾರ್ಯಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅಲ್ಲದೆ, ಯಾವುದೇ ದುರಂತ ಸಂಭವಿಸಿದ ತಕ್ಷಣ ಸ್ಪಂದಿಸಲು ಹಾಗೂ ಪರಿಹಾರ ಧನವನ್ನು ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳುವಂತೆಯೂ ಅವರು ನಿರ್ದೇಶಿಸಿದರು. ಪರಿಹಾರ ಶಿಬಿರಗಳನ್ನು ಸ್ಥಾಪಿಸುವ ಅಗತ್ಯದ ಕುರಿತು ಮುಂಚಿತವಾಗಿ ಪರಿಗಣಿಸಿ ಪೂರ್ವಸಿದ್ಧತಾ ಕ್ರಮಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಮೂರು ಮನೆಗಳು ಸಂಪೂರ್ಣವಾಗಿ ಮತ್ತು ಹತ್ತು ಮನೆಗಳು ಆಂಶಿಕವಾಗಿ ಹಾನಿಗೀಡಾಗಿದೆ. ಕಾಸರಗೋಡು ತಾಲೂಕಿನಲ್ಲಿ, ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಚಂದ್ರಗಿರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ತಿಳಿಸಿದ್ದಾರೆ.
ಆನ್ಲೈನ್ ಮೂಲಕ ನಡೆದ ಸಭೆಯಲ್ಲಿ ಎಡಿಎಂ ಪಿ. ಉದಯಕುಮಾರ್ ಅವರು ಜಿಲ್ಲೆಯ ಪರಿಸ್ಥಿತಿಯನ್ನು ವಿವರಿಸಿದರು. ತಹಸೀಲ್ದಾರರಾದ ಪ್ರೇಮ್ ರಾಜ್, ವಿ. ಶ್ರೀಕುಮಾರ್, ಕೆ. ರಮೇಶನ್ ಮತ್ತು ಕೆ.ಬಿ. ರಾಮು, ಎಲ್ಎಸ್ಜಿಡಿ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥೀತರಿದ್ದರು.



