ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಯನ್ನುಹಿರಿಯ ವಿದ್ಯಾರ್ಥಿಗಳ ತಂಡವೊಂದು ರ್ಯಾಗಿಂಗ್ ನಡೆಸಿರುವ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರ್ಯಾಗಿಂಗ್‍ನಿಂದ ಗಾಯಗೊಂಡಿರುವ ವಿದ್ಯಾರ್ಥಿ ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕುಂಬ್ಡಾಜೆ ಪಂಚಾಐಇತಿ ಬೆಳಿಂಜ ನಿವಾಸಿಯಾಗಿರು
ವ 16 ವರ್ಷದ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ. ಅಂಗಿಯ ಕತ್ತಿನ ಭಾಗದ ಬಟನ್ ಹಾಕಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಪ್ಲಸ್ ಟು ತರಗತಿಯ ನಾಲ್ಕು ಮಂದಿ ವಿದ್ಯಾರ್ಥಿಗಳು ವಿದ್ಯಾರ್ಥಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಯನ್ನು ಅಡ್ಡಗಟ್ಟಿದ ಹಿರಿಯ ವಿದ್ಯಾರ್ಥಿಗಳ ತಂಡ ಆತನನ್ನು ಥಳಿಸಿ, ಕಾಲಿನಿಂದ ತುಳಿದು ಗಾಯಗೊಳಿಸಿದೆ.
ಮಂಗಳವಾರ ಶಾಲೆಯ ಪ್ಲಸ್‍ವನ್ ಮತ್ತು ಪ್ಲಸ್ ಟು ವಿದ್ಯಾರ್ಥಿಗಳ ನಡುವೆ ಖಾಸಗಿ ಬಸ್ಸಿನೊಳಗೆ ವಾಗ್ವಾದ ನಡೆದಿದ್ದು, ಬುಧವಾರವೂ ಈ ಘರ್ಷಣೆ ಮುಂದುವರಿಯುವ ಮುನ್ಸೂಚನೆ ಅರಿತ ಶಾಲಾ ಆಡಳಿತ ಮಂಡಳಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ಲಸ್ ಟು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿತ್ತು. ವಿದ್ಯಾರ್ಥಿಗಳ ನಡುವಿನ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಗುರುವಾರ ರಕ್ಷಕ-ಶಿಕ್ಷಕ ಸಂಘದ ತುರ್ತು ಸಭೆ ಯೋಜಿಸಲಾಗಿದ್ದು, ಸಭೆ ನಡೆಯುವ ಅಲ್ಪ ಸಮಯದ ಮೊದಲು ಹಿರಿಯ ವಿದ್ಯಾರ್ಥಿಗಳ ತಂಡ ಕಿರಯ ವಿದ್ಯಾರ್ಥಿಗೆ ಹಲ್ಲೆ ನಡೆಸಿದೆ. ಸಂತ್ರಸ್ತ ವಿದ್ಯಾರ್ಥಿ ಹಾಗೂ ಶಾಲಾ ಅಧಿಕಾರಿಗಳು ಹಿರಿಯ ವಿದ್ಯಾರ್ಥಿಗಳ ಪುಂಡಾಟಿಕೆ ವಿರುದ್ಧ ದೂರು ನೀಡಿದ್ದಾರೆ. ಪೆÇಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಎರಡು ದಿವಸಗಳ ಹಿಂದೆ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ರ್ಯಾಗಿಂಗ್ ಪ್ರಕರಣ ನಡೆದಿದ್ದು, ಮಕ್ಕಳಲ್ಲಿ ಅಮಾನುಷ ಕೃತ್ಯ ಹೆಚ್ಚಾಗುತ್ತಿರುವ ಬಗ್ಗೆ ಪೋಷಕರು ಆತಂಕಕ್ಕೀಡಾಗಿದ್ದಾರೆ.

