ನವದೆಹಲಿ:ಕಾಕ್ರೋಚ್ ಜನತಾ ಪಾರ್ಟಿ (AAP) ಆಯೋಜಿಸಿದ್ದ 'ಚಲೋ ಸಂಸದ್' ಮೆರವಣಿಗೆಯ ವೇಳೆ ಮಹಿಳಾ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ದಿಲ್ಲಿ ಪೊಲೀಸರ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಈಶಾನ್ಯ ಜಿಲ್ಲೆ) ಸಂದೀಪ್ ಲಂಬಾ ಅವರನ್ನು ಜಂತರ್ ಮಂತರ್‌ನ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಜುಲೈ 20ರಂದು ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ 'ಚಲೋ ಸಂಸದ್' ಮೆರವಣಿಗೆ ಆಯೋಜಿಸಲಾಗಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ಸಂದೀಪ್ ಲಂಬಾ ಅವರು ಮಹಿಳಾ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿತ್ತು.
AAP ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ನಡೆಸಲಾಗಿದೆ ಎಂಬ ಆರೋಪದ ಅರ್ಜಿಯ ವಿಚಾರಣೆ ವೇಳೆ ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ಸಂದೀಪ್ ಲಂಬಾ ಅವರ ಹೆಸರು ಪ್ರಸ್ತಾಪವಾಗಿತ್ತು.
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, 'ಹೆಚ್ಚುವರಿ ಡಿಸಿಪಿ ಸಂದೀಪ್ ಲಂಬಾ ಯಾವುದೇ ಪ್ರತಿರೋಧ ತೋರದ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೊದಲ್ಲಿ ಕಾಣುತ್ತದೆ. ಅವರು ಯಾವುದೇ ಚಲನೆ ಮಾಡುತ್ತಿಲ್ಲ. ಅಗತ್ಯವಿದ್ದರೆ ವೀಡಿಯೊವನ್ನು ನ್ಯಾಯಾಲಯಕ್ಕೆ ತೋರಿಸಬಹುದು. ತಪ್ಪು ಮಾಡಿದ ಸಮವಸ್ತ್ರಧಾರಿಗಳ ಹೆಸರನ್ನು ಹೇಳಲು ನಾವು ಹೆದರಬಾರದು. ಅವರನ್ನು ನ್ಯಾಯಾಲಯಕ್ಕೆ ಕರೆಸಿ ಹೊಣೆಗಾರರನ್ನಾಗಿ ಮಾಡಬೇಕು' ಎಂದು ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠಕ್ಕೆ ತಿಳಿಸಿದರು.
ಉಮೇಶ್ ಕುಮಾರ್ ಮತ್ತು ಅಂಶುಲ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ದಿಲ್ಲಿ ಪೊಲೀಸರು, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)ಕ್ಕೆ ನೋಟಿಸ್ ಜಾರಿಗೊಳಿಸಿದ್ದು, ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ, ಸಿಸಿಟಿವಿ ದೃಶ್ಯಗಳು ಮತ್ತು ವೀಡಿಯೊ ದಾಖಲೆಗಳು ಸೇರಿದಂತೆ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂರಕ್ಷಿಸುವಂತೆ ಆದೇಶಿಸಿದೆ.

